ಪಟ್ನಾ: ಟಿಬೆಟ್- ನೇಪಾಳ ಗಡಿಯಲ್ಲಿ ಸಂಭವಿಸಿರುವ ಭೂಕಂಪದ ಪ್ರಭಾವ ಉತ್ತರ ಭಾರತಕ್ಕೂ ತಟ್ಟಿದ್ದು ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.
ನೇಪಾಳದ ಲೊಬುಚೆ ಬಳಿ ಮಂಗಳವಾರ ಬೆಳಿಗ್ಗೆ 7.01 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಪರಿಣಾಮ ಬಿಹಾರ ಸೇರಿ ಉತ್ತರ ಭಾರತದ ಹಲವು ರಾಜ್ಯಗಳ ಮೇಲೆ ಬೀರಿದೆ.
ಬಿಹಾರ ವಿಪತ್ತು ನಿರ್ವಹಣಾ ವಿಭಾಗದ ಪ್ರಕಾರ ಪಟ್ನಾ, ಮಧುಬನಿ, ದರ್ಭಾಂಗಾ, ಸಮಸ್ತಿಪುರ, ಮುಜಾಫರ್‌ಪುರ್ ಸೇರಿ ಭಾರತ -ನೇಪಾಳ ಗಡಿಗೆ ಹತ್ತಿರವಿರುವ ಹಲವು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದೆ.
ಭೂಕಂಪದಿಂದ ಭಯಗೊಂಡ ಜನರು ಮನೆಯಿಂದ ಹೊರ ಓಡಿದ್ದಾರೆ.
ಬಿಹಾರ ಮಾತ್ರವಲ್ಲದೆ ಅಸ್ಸಾಂ, ಪಶ್ಚಿಮ ಬಂಗಾಳದ ಕೆಲ ಜಿಲ್ಲೆಗಳಲ್ಲೂ ಭೂಮಿ ಕಂಪಿಸಿದೆ. ಭಾರತದ ರಾಜ್ಯಗಳಲ್ಲಿ ಯಾವುದೇ ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಟಿಬೆಟ್ ಭಾಗದಲ್ಲಿ ಭೂಕಂಪ
ಮಂಗಳವಾರ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಚೀನಾ ಸ್ವಾಯತ್ತ ಟಿಬೆಟ್ ಭಾಗದಲ್ಲಿ 6.9 ರಷ್ಟು ತೀವ್ರತೆಯ ಭೂಕಂಪವಾಗಿದ್ದು ಈವರೆಗೆ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಗಾಯಗೊಂಡ 60 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.