ಲಾಸ್ ಏಂಜಲೀಸ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅತೀ ದೊಡ್ಡ ಕಾಳ್ಗಿಚ್ಚು ಸಂಭವಿಸಿರುವ ಹಿನ್ನೆಲೆಯಲ್ಲಿ ಜನವರಿ 17 ರಂದು ನಿಗದಿಯಾಗಿದ್ದ 97ನೇ ಅಕಾಡೆಮಿ ಪ್ರಶಸ್ತಿಗಳ ನಿರ್ದೇಶನಗಳ ಪ್ರಕಟಣೆ ಕಾರ್ಯಕ್ರಮವನ್ನು ಜನವರಿ 19ಕ್ಕೆ ಮುಂದೂಡಲಾಗಿದೆ.
ದಿನಾಂಕ ಬದಲಾವಣೆಗೆ ಕುರಿತು ಅಕಾಡೆಮಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿಲ್ ಕ್ರಾಮರ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ವಿನಾಶಕಾರಿ ಕಾಳ್ಗಿಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನಮ್ಮ ಮನದಾಳದ ಸಂತಾಪಗಳನ್ನು ಸೂಚಿಸಲು ನಾವು ಬಯಸುತ್ತೇವೆ. ನಮ್ಮ ಹಲವು ಸದಸ್ಯರು ಮತ್ತು ಉದ್ಯಮದ ಸಹೋದ್ಯೋಗಿಗಳು ಲಾಸ್ ಏಂಜಲೀಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ' ಎಂದು ಕ್ರಾಮರ್ ತಿಳಿಸಿದ್ದಾರೆ.
ಆಸ್ಕರ್ ನಾಮನಿರ್ದೇಶನದ ಮತದಾನದ ಗಡುವನ್ನು ಮತ್ತೆ ಎರಡು ದಿನಗಳವರೆಗೆ (ಜನವರಿ 14) ವಿಸ್ತರಿಸಲಾಗಿದೆ. ಸುಮಾರು 10,000 ಅಕಾಡೆಮಿ ಸದಸ್ಯರಿಗೆ ಮತದಾನ ಮಾಡಲಿದ್ದಾರೆ. ಇದಕ್ಕೂ ಮುನ್ನ ಜನವರಿ 8ರಂದು ಮತದಾನ ನಡೆಸಲು ನಿರ್ಧರಿಸಲಾಗಿತ್ತು. ಬಳಿಕ ದಿನಾಂಕವನ್ನು ಜನವರಿ 12ಕ್ಕೆ ಮುಂಡೂಡಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನಲ್ಲಿ 2025ರ ಮಾರ್ಚ್ 2ಕ್ಕೆ ದಿನಾಂಕ ನಿಗದಿಯಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಹಾಲಿವುಡ್ ಸೆಲೆಬ್ರಿಟಿಗಳಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್, ಪ್ಯಾರಿಸ್ ಹಿಲ್ಟನ್ ಮತ್ತು ಕ್ಯಾರಿ ಎಲ್ವೆಸ್ ಅವರು ಕಾಳ್ಗಿಚ್ಚಿನಿಂದ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಜನವರಿ 12 ರಂದು ಸಾಂಟಾ ಮೋನಿಕಾದಲ್ಲಿ ನಿಗದಿಯಾಗಿದ್ದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಕಾರ್ಯಕ್ರಮವನ್ನು ಜನವರಿ 26ಕ್ಕೆ ಮುಂದೂಡಲಾಗಿದೆ.
ಉತ್ತರ ಕ್ಯಾಲಿಫೋರ್ನಿಯಾದ ಒಳನಾಡಿನಲ್ಲಿ ಬೆಂಕಿಗೆ ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಡು ನಾಶಗೊಂಡಿದೆ. ದಟ್ಟ ಹೊಗೆ ವಾತಾವರಣವನ್ನು ಆವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ಡಾರೆ.
ಅರಣ್ಯ ಸಮೀಪದಲ್ಲಿ ವಾಸಿಸುತ್ತಿದ್ದ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಗ್ನಿಶಾಮಕ ದಳ, ಹೆಲಿಕಾಪ್ಟರ್, ವಿಮಾನಗಳ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.