ಅಹಮದಾಬಾದ್: ಕೆಲವು ವರ್ಷ ರಾಜಕೀಯದಿಂದ ದೂರ ಉಳಿದಿದ್ದ 2002ರ ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಅವರು ಈಗ ಮತ್ತೊಮ್ಮೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಗುಜರಾತ್‌ನ ಬಿಜೆಪಿಯಲ್ಲಿ ಹಲವು ಮುಖ್ಯ ಸ್ಥಾನಗಳನ್ನು ಮಾಯಾ ಅವರಿಗೆ ನೀಡಲಾಗಿದೆ.
ರಾಜ್‌ಕೋಟ್ ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಜವಾಬ್ದಾರಿಯನ್ನು 69 ವರ್ಷದ ಮಾಯಾ ಅವರಿಗೆ ಪಕ್ಷ ನೀಡಿದೆ. ಈ ಸಂಬಂಧ ಮುಖ್ಯಸ್ಥರ ಸ್ಥಾನಗಳಿಗೆ ಸ್ಪರ್ಧಿಸಲು ಇಚ್ಛಿಸುತ್ತಿರುವ ಪಕ್ಷದ ಕಾರ್ಯಕರ್ತರಿಂದ ಅರ್ಜಿಗಳನ್ನು ಮಾಯಾ ಅವರು ಶನಿವಾರ ಪಡೆದುಕೊಂಡರು. ಬಿಜೆಪಿಯ ಇತರ ಮುಖಂಡರು ಮಾಯಾ ಅವರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2022ರ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಯಾ ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.
'ಕಳೆದ ವಿಧಾನಸಭೆ ಚುನಾವಣೆಯ ವೇಳೆ, ಮೆಹಸಾಣಾ ಕ್ಷೇತ್ರದ ಮೇಲ್ವಿಚಾರಣೆಯನ್ನು ನನಗೆ ನೀಡಲಾಗಿತ್ತು. ಆಗಲೇ ನಾನು ಮರಳಿ ರಾಜಕೀಯ ಪ್ರವೇಶ ಪಡೆದುಕೊಂಡಿದ್ದೆ. ನಾನು ಕಾರ್ಯಕಾರಿ ಸಮಿತಿಯ ಸದಸ್ಯೆಯೂ ಹೌದು. ನಾನು ಈಗ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎಂಬುದು ನಿಮ್ಮ ಅಭಿಪ್ರಾಯವಷ್ಟೇ' ಎಂದು ಮಾಯಾ ಅವರು ' ಪ್ರತಿಕ್ರಿಯಿಸಿದರು.