ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ಮಹೋತ್ಸವ ಜರಗುತ್ತಿದ್ದು ದಿನಂಪ್ರತಿ ನೂರಾರು ಭಕ್ತರು ಪ್ರಾತಃಕಾಲ ಕ್ಷೇತ್ರಕ್ಕೆ ಭೇಟಿಯಿತ್ತು ದೇವರ ದರುಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಇದರಂಗವಾಗಿ ಬುಧವಾರ ಶಂ.ನಾ.ಅಡಿಗ ಕುಂಬಳೆ ಅವರಿಂದ ಮನ್ಮಥ ದಹನ ಎಂಬ ಹರಿಕಥಾ ಸಂಕೀರ್ತನೆ ಜರಗಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಚಂದ್ರಶೇಖರ ನಾವಡ ಬಜಕೂಡ್ಲು ಆಶೀರ್ವಚನಗೈದು ಮಾತನಾಡುತ್ತಾ ದೇವರ ದರುಶನದಿಂದ ದೇಹದ ಚೈತನ್ಯ ವೃದ್ಧಿಸಬಹುದಾಗಿದ್ದು ಪ್ರಾತಃಕಾಲದ ದೇವನಾಮ ಸ್ಮರಣೆ ಮತ್ತು ಶ್ರವಣ ಜೀವನ ಪಾವನಕ್ಕೆ ಕಾರಣೀಭೂತವಾಗುತ್ತದೆ ಎಂದರು.ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹರಿಕಥಾ ಕಾಲಕ್ಷೇಪ ನಡೆಸಿಕೊಟ್ಟ ಶಂ.ನಾ.ಅಡಿಗ ಕುಂಬಳೆ ಅವರನ್ನು ಸನ್ಮಾನಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್, ಹರಿಕಥಾ ಸೇವಾಕರ್ತರಾದ ಬಾಲಕೃಷ್ಣ ಭಂಡಾರಿ ಜೆ.ಬಿ. ಪುತ್ತಿಗೆಬೈಲು,ಕ್ಷೇತ್ರ ಪದಾಧಿಕಾರಿಗಳಾದ ಕೇಶವ ಮಾಸ್ತರ್, ಆನಂದ ಎಂ.ಕೆ, ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಿ.ರಾಜೇಂದ್ರ ರೈ ಸ್ವಾಗತಿಸಿ ನಿರೂಪಿಸಿದರು.