ಕೊಚ್ಚಿ: ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಕ್ಷಮೆ ಸಿಗಬಹುದೆಂದು ಕುಟುಂಬಸ್ಥರು ಮತ್ತು ಕೇರಳದ ಮಾನವ ಹಕ್ಕುಗಳ ಹೋರಾಟಗಾರರು ನಿರೀಕ್ಷಿಸುತ್ತಿದ್ದಾರೆ. ಪ್ರಕರಣದಲ್ಲಿ 2017ರಿಂದ ನಿಮಿಷಾ ಅವರನ್ನು ಯೆಮೆನ್‌ನ ಜೈಲಿನಲ್ಲಿಡಲಾಗಿದೆ.
'ಸಂತ್ರಸ್ತ ವ್ಯಕ್ತಿಯ ಕುಟುಂಬಸ್ಥರು ಬ್ಲಡ್ ಮನಿಯನ್ನು (ಸಾವಿಗೆ ಪ್ರತಿಯಾಗಿ ಹಣದ ರೂಪದಲ್ಲಿ ನೀಡುವ ಪರಿಹಾರ) ಸ್ವೀಕರಿಸಿದರೆ ನಿಮಿಷಾ ಪ್ರಿಯಾ ಅವರ ಜೀವವು ಉಳಿಯುತ್ತದೆ. ಈಗಲೂ ಭರವಸೆ ಇದೆ. ಆದರೆ ಈ ಸಮಯದಲ್ಲಿ ಕೇಂದ್ರ ಸರ್ಕಾರದ ತುರ್ತು ನೆರವಿನ ಅಗತ್ಯವಿದೆ. ಅಗತ್ಯ ಹಣ ಹೊಂದಿಸಲು ಶ್ರಮಿಸುತ್ತಿದ್ದೇವೆ' ಎಂದು ನಿಮಿಷಾ ಪ್ರಿಯಾ ಉಳಿಸಿ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿಯ ಸದಸ್ಯ ಬಾಬು ಜಾನ್ ತಿಳಿಸಿದರು.
ಯೆಮೆನ್ ಪ್ರಜೆಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.