ಪಟ್ನಾ : ಶಾಸನಸಭೆಗಳ ಘನತೆಯನ್ನು ಕಾಪಾಡಿಕೊಳ್ಳಲು, ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಶಾಸಕರು-ಸಂಸದರಿಗೆ ನೀತಿ ಸಂಹಿತೆ ರೂಪಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಹೇಳಿದರು.
ಅಖಿಲ ಭಾರತ ಸಭಾಪತಿಗಳು-ಸಭಾಧ್ಯಕ್ಷರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 'ಪಕ್ಷಗಳು ತಮ್ಮ ಶಾಸಕರು-ಸಂಸದರಿಗೆ ನೀತಿ ಸಂಹಿತೆಯನ್ನು ರೂಪಿಸಿ, ಅವುಗಳನ್ನು ಪಾಲಿಸುವಂತೆ ನೋಡಿಕೊಂಡರೆ ಮಾತ್ರ ಶಾಸನಸಭೆಗಳ ಘನತೆಯನ್ನು ಕಾಯ್ದುಕೊಳ್ಳಲು ಸಾಧ್ಯ' ಎಂದು ಪ್ರತಿಪಾದಿಸಿದರು.
ತಂತ್ರಜ್ಞಾನವನ್ನು ಬಳಸಿಕೊಂಡು, ಶಾಸನಸಭೆಗಳ ಕಾರ್ಯ ವಿಧಾನವನ್ನು ಮತ್ತಷ್ಟು ಸುಧಾರಿಸಲು ಎಲ್ಲ ಸಭಾಪತಿಗಳು-ಸಭಾಧ್ಯಕ್ಷರು ನಿರ್ಣಯಿಸಿದ್ದಾರೆ ಎಂದು ಅವರು ತಿಳಿಸಿದರು.
'ಲೋಕಸಭೆಯಲ್ಲಿ 1947ರಿಂದ ಈವರೆಗೆ ನಡೆದಿರುವ ಎಲ್ಲ ಚರ್ಚೆಗಳನ್ನು, ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಎಲ್ಲ 22 ಭಾಷೆಗಳಿಗೆ ಅನುವಾದ ಮಾಡಲಾಗುತ್ತಿದೆ. ವಿಧಾನಸಭೆಗಳೂ ಇದೇ ಮಾದರಿಯಲ್ಲಿ ಎಲ್ಲ ಚರ್ಚೆಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ತರ್ಜುಮೆ ಮಾಡಬೇಕು ಹಾಗೂ ಅದಕ್ಕೆ ಅಗತ್ಯವಿರುವ ತಾಂತ್ರಿಕ ನೆರವನ್ನು ಸಂಸದೀಯ ಸಚಿವಾಲಯದಿಂದ ಒದಗಿಸಲಾಗುವುದು' ಎಂದೂ ಇದೇ ವೇಳೆ ಹೇಳಿದರು.