ಕೃಷ್ಣಾನಗರ: ಬಾಂಗ್ಲಾದೇಶದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಮೂವರಿಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ತ್ವರಿತ ಗತಿ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2021ರಲ್ಲಿ ಬಾಲಕಿಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಸಾಗಿಸುವಲ್ಲಿ ಮೂವರು ಭಾಗಿಯಾಗಿದ್ದರು ಎಂದು ಧಂತಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಬಾಂಗ್ಲಾದೇಶದ ಹುಡುಗಿಗೆ ಭಾರತದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಆಮಿಷ ಒಡ್ಡಿ, ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣ ಮತ್ತು ಅನೈತಿಕ ಕಳ್ಳಸಾಗಣೆ ವಿಭಾಗಗಳ ಅಡಿಯಲ್ಲಿ ಮೂವರನ್ನು ಅಪರಾಧಿಗಳೆಂದು ಪರಿಗಣಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.