ಬೀಜಿಂಗ್: ಗಾಲ್ವಾನ್ ಸಂಘರ್ಷದ ಬಳಿಕ ಹಳಸಿದ್ದ ಭಾರತ-ಚೀನಾ ನಡುವಿನ ಸಂಬಂಧವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ಎರಡೂ ದೇಶಗಳ ಮಧ್ಯೆ ಇರುವ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಒಮ್ಮತ ಏರ್ಪಟ್ಟಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಅವರು ಎರಡು ದಿನಗಳ ಕಾಲ ಚೀನಾಗೆ ನೀಡಿದ್ದ ಭೇಟಿ ಅಂತ್ಯಗೊಂಡಿದ್ದು, ಎರಡೂ ದೇಶಗಳ ಮಧ್ಯೆ ನಡೆದ ಮಾತುಕತೆ ಕುರಿತು ಚೀನಾ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.
'ಚೀನಾ, ಭಾರತದ ಮೂಲಭೂತ ಹಿತಾಸಕ್ತಿಗಾಗಿ ಮತ್ತು ದ್ವಿಪಕ್ಷೀಯ ಸಂಬಂಧವು ದೀರ್ಘಕಾಲ ಇರುವುದನ್ನು ಗಮನದಲ್ಲಿಟ್ಟುಕೊಂಡು ಸಂಬಂಧ ಏರ್ಪಡಬೇಕು. ಮಾತುಕತೆಯಲ್ಲಿ ಎರಡೂ ದೇಶಗಳು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಎರಡೂ ದೇಶಗಳ ಮಾತುಕತೆ ನೇರವಾಗಿ ಮತ್ತು ರಚನಾತ್ಮಕವಾಗಿ ಇರಬೇಕು. ಸಕಾರಾತ್ಮಕವಾದ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಬೇಕು' ಎಂದು ಚೀನಾ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪೂರ್ಣ ಸಹಕಾರ: ಪರಸ್ಪರ ಭರವಸೆ
ಶಾಂಘೈ ಸಹಕಾರ ಸಂಸ್ಥೆಗೆ (ಎಸ್‌ಸಿಒ-ಈ ಸಂಸ್ಥೆಯನ್ನು ಚೀನಾ 2001ರಲ್ಲಿ ಸ್ಥಾಪಿಸಿದೆ) ನಮ್ಮ ನಾಯಕತ್ವವನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸಿದೆ. ಈ ಸಂಸ್ಥೆಯಡಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಲು ಒಪ್ಪಿಕೊಂಡಿದೆ ಎಂದು ಚೀನಾ ಹೇಳಿದೆ
ದ್ವಿಪಕ್ಷೀಯ ಮಾತುಕತೆಗಳನ್ನು ನಿಯಮಿತವಾಗಿ ನಡೆಸಲು ಒಪ್ಪಿಗೆ. ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ ಏರ್ಪಟ್ಟು 75 ವರ್ಷ ಸಂದಿವೆ. ಈ ಹಂತದಲ್ಲಿ ಮಾಧ್ಯಮ ಮತ್ತು ಚಿಂತಕರ ಛಾವಡಿ ಸೇರಿ ಸಾಂಸ್ಕೃತಿಕ ವಿಚಾರಗಳ ವಿನಿಮಯಕ್ಕೆ ಸಹಮತ
ನೇರ ವಿಮಾನಯಾನ ಆರಂಭ ಮಾನಸ ಸರೋವರ ಯಾತ್ರೆ ಪುನರಾರಂಭ ಸೇರಿ ಎರಡೂ ದೇಶಗಳಲ್ಲಿ ಆಯಾ ದೇಶಗಳ ವಿವಿಧ ಮಾಧ್ಯಮ ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ (ಚೀನಾದಲ್ಲಿ ವರದಿಗಾರಿಕೆಗೆ ಪಿಟಿಐ ಸುದ್ದಿ ಸಂಸ್ಥೆಗೆ ಮಾತ್ರವೇ ಅವಕಾಶ ನೀಡಲಾಗಿತ್ತು)
ಎರಡೂ ದೇಶಗಳ ನಡುವಿನ ಜಲ ಸಹಕಾರ ಮತ್ತು ಜಲಸಂಪನ್ಮೂಲ ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಮ್ಮತಿ. ಜಲ ಸಹಕಾರ ನೀಡುವ ಸಂಬಂಧ ತಜ್ಞರ ತಂಡದಿಂದ ಶೀಘ್ರವೇ ಮಾತುಕತೆಗೆ ಒಪ್ಪಿಗೆ