ಪೋರ್‌ಬಂದರ್: ಗುಜರಾತ್‌ನ ಪೋರ್‌ಬಂದರ್ ನಗರದ ಹೊರವಲಯದಲ್ಲಿ ಭಾರತೀಯ ಕರಾವಳಿ ಪಡೆಯ(ಐಸಿಜಿ) ಹೆಲಿಕಾಪ್ಟರ್‌ವೊಂದು ಪತನಗೊಂಡು ಬೆಂಕಿ ಹತ್ತಿಕೊಂಡ ಪರಿಣಾಮ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
'ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಕರಾವಳಿ ಪಡೆಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಧ್ಯಾಹ್ನ 12.10ಕ್ಕೆ ಇಳಿಯಲು ಯತ್ನಿಸಿದಾಗ ಅವಘಡ ಸಂಭವಿಸಿದೆ' ಎಂದು ಪೋರ್‌ಬಂದರ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಗೀರಥ್‌ಸಿನ್ಹಾ ಜಡೇಜಾ ಅವರು ತಿಳಿಸಿದ್ದಾರೆ.
'ಹೆಲಿಕಾಪ್ಟರ್ ಪತನಗೊಂಡ ತಕ್ಷಣ ಬೆಂಕಿ ಹತ್ತಿಕೊಂಡಿತು. ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಸಹಾಯದಿಂದ ಬೆಂಕಿ ನಂದಿಸಲಾಗಿದ್ದು, ಹೆಲಿಕಾಪ್ಟರ್ ಒಳಗಿದ್ದ ಇಬ್ಬರು ಪೈಲಟ್ ಮತ್ತು ಒಬ್ಬ ಸಿಬ್ಬಂದಿಯನ್ನು ಹೊರಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ಹೇಳಿದ್ದಾರೆ.
'ಆಸ್ಪತ್ರೆಗೆ ದಾಖಲಿಸುವ ಮೊದಲೇ ಇಬ್ಬರು ಮೃತಪಟ್ಟಿದ್ದರು. ಇನ್ನೊಬ್ಬ ಸಿಬ್ಬಂದಿ ಆಸ್ಪತ್ರೆಯಲ್ಲಿ ಮೃತಪಟ್ಟರು' ಎಂದು ಕಮಲ್ ಭಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಕನ್ಮಿಯಾ ಅವರು ಮಾಹಿತಿ ನೀಡಿದ್ದಾರೆ.
ಮೃತರನ್ನು ಕಮಾಂಡೆಂಟ್(ಜೆ.ಜಿ) ಸೌರಭ್, ಡೆಪ್ಯುಟಿ ಕಮಾಂಡೆಂಟ್ ಎಸ್.ಕೆ ಯಾದವ್ ಮತ್ತು ಪ್ರಧಾನ ನಾವಿಕ ಮನೋಜ್ ಎಂದು ಗುರುತಿಸಲಾಗಿದೆ.
ಅವಘಡಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಸಿಜಿ ತಿಳಿಸಿದೆ.