HEALTH TIPS

ಷರಿಯಾ ಕಾನೂನು ಬದಲು ಉತ್ತರಾಧಿಕಾರ ಕಾಯ್ದೆ ಅನ್ವಯಗೊಳಿಸಲು ಮುಸ್ಲಿಂ ಮಹಿಳೆ ಕೋರಿಕೆ

Top Post Ad

Click to join Samarasasudhi Official Whatsapp Group

Qries

ನವದೆಹಲಿ: ಷರಿಯಾ ಕಾನೂನಿನ ಬದಲು ತನಗೆ ಭಾರತೀಯ ಉತ್ತರಾಧಿಕಾರ ಕಾಯ್ದೆಯನ್ನು ಅನ್ವಯಗೊಳಿಸಬೇಕು ಎಂಬ ಕೋರಿಕೆಯೊಂದಿಗೆ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚನೆ ನೀಡಿದೆ.

ಕೇರಳದ ಆಳಪ್ಪುಳದ ಸಫಿಯಾ ಪಿ.ಎಂ. ಅವರು ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠದ ಎದುರು ಬಂದಿತ್ತು. ಸಫಿಯಾ ಅವರು 'ಕೇರಳದ ಮಾಜಿ ಮುಸ್ಲಿಮರು' ಸಂಘಟನೆಯ ಪ್ರಧಾನ ಕಾರ್ಯದರ್ಶಿ.

ಅರ್ಜಿಯಲ್ಲಿ ಬಹಳ ಆಸಕ್ತಿಕರವಾದ ಪ್ರಶ್ನೆಯನ್ನು ಎತ್ತಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. 'ಅರ್ಜಿದಾರ ಮಹಿಳೆಯು ಹುಟ್ಟಿನಿಂದ ಮುಸ್ಲಿಂ. ಆದರೆ ಷರಿಯಾದಲ್ಲಿ ತನಗೆ ನಂಬಿಕೆ ಇಲ್ಲ, ಅದು ಪ್ರತಿಗಾಮಿ ಕಾನೂನು ಎಂದು ಅವರು ಹೇಳುತ್ತಿದ್ದಾರೆ' ಎಂದು ಮೆಹ್ತಾ ವಿವರಿಸಿದರು.

ಅರ್ಜಿಗೆ ಪ್ರತಿಯಾಗಿ ಕೇಂದ್ರವು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಪೀಠ ಸೂಚಿಸಿತು. ಇದಕ್ಕಾಗಿ ಕೇಂದ್ರಕ್ಕೆ ನಾಲ್ಕು ವಾರಗಳ ಸಮಯ ನೀಡಿತು.

ತಾನು ಇಸ್ಲಾಂ ಧರ್ಮವನ್ನು ತೊರೆದಿಲ್ಲವಾದರೂ, ತನಗೆ ಈಗ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಅರ್ಜಿದಾರ ಮಹಿಳೆ ಹೇಳಿದ್ದಾರೆ. ಸಂವಿಧಾನದ 25ನೆಯ ವಿಧಿಯ ಅಡಿಯಲ್ಲಿ ತನಗೆ ಧರ್ಮದಲ್ಲಿ 'ನಂಬಿಕೆ ಹೊಂದದೆ ಇರುವ ಹಕ್ಕು' ಕೂಡ ಇರಬೇಕು ಎಂದು ಕೋರಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ನಡೆದುಕೊಳ್ಳುವ ಬಯಕೆ ಇಲ್ಲದವರಿಗೆ ದೇಶದ ಧರ್ಮನಿರಪೇಕ್ಷ ಕಾನೂನುಗಳಿಗೆ ಅನುಗುಣವಾಗಿ ನಡೆದುಕೊಳ್ಳುವ, ಉತ್ತರಾಧಿಕಾರದ ವಿಚಾರದಲ್ಲಿ ಭಾರತೀಯ ಉತ್ತರಾಧಿಕಾರ ಕಾಯ್ದೆಯನ್ನು ಪಾಲಿಸುವ ಅವಕಾಶ ಇರಬೇಕು ಎಂದು ಸಫಿಯಾ ಕೋರಿದ್ದಾರೆ.

ಷರಿಯಾ ಕಾನೂನಿನ ಪ್ರಕಾರ ಮುಸ್ಲಿಂ ಮಹಿಳೆಯರು ಆಸ್ತಿಯಲ್ಲಿ ಮೂರನೆಯ ಒಂದರಷ್ಟು ಹಕ್ಕು ಹೊಂದಿರುತ್ತಾರೆ. ಅರ್ಜಿದಾರ ಮಹಿಳೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಪಾಲನೆ ಮಾಡಬೇಕಿಲ್ಲ ಎಂಬ ಘೋಷಣೆಯು ಕೋರ್ಟ್‌ನಿಂದ ಬರಬೇಕು. ಇಲ್ಲದಿದ್ದರೆ ಆಕೆಯ ತಂದೆಗೆ ಆಸ್ತಿಯಲ್ಲಿ ಮೂರನೆಯ ಒಂದಕ್ಕಿಂತ ಹೆಚ್ಚಿನ ಪಾಲನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಸಫಿಯಾ ಪರ ವಕೀಲರು ಹೇಳಿದರು.

'25ನೆಯ ವಿಧಿಯು ನೀಡಿರುವ ಧಾರ್ಮಿಕ ಆಚರಣೆಗಳ ಹಕ್ಕು ಧರ್ಮವನ್ನು ನಂಬದೆ ಇರುವ ಹಕ್ಕನ್ನು ಕೂಡ ಒಳಗೊಳ್ಳಬೇಕು. ಧರ್ಮದಿಂದ ಹೊರನಡೆಯುವ ವ್ಯಕ್ತಿಯು ಉತ್ತರಾಧಿಕಾರದ ವಿಚಾರದಲ್ಲಿ ಮತ್ತು ಇತರ ಹಕ್ಕುಗಳ ವಿಚಾರದಲ್ಲಿ ಅನರ್ಹನಾಗಬಾರದು' ಎಂದು ಅರ್ಜಿಯಲ್ಲಿ ಕೋರಲಾಗಿದೆ.

'ಷರಿಯಾ ಕಾನೂನಿನ ಪ್ರಕಾರ, ವ್ಯಕ್ತಿಯು ಇಸ್ಲಾಂನಿಂದ ಹೊರನಡೆದರೆ ಆ ವ್ಯಕ್ತಿಯನ್ನು ಸಮುದಾಯದಿಂದ ಹೊರಹಾಕಲಾಗುತ್ತದೆ. ಅದಾದ ನಂತರ ಆಕೆಗೆ ಪಾಲಕರ ಆಸ್ತಿಯ ಉತ್ತರಾಧಿಕಾರದ ಹಕ್ಕು ಇರುವುದಿಲ್ಲ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries