ಮುಂಬೈ: ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಾಲ್ಥಿ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಆರಂಭವಾದ ಘರ್ಷಣೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಗ್ರಾಮದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿ, ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಸುಮಾರು ಏಳು ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಮಂಗಳವಾರ ತಡರಾತ್ರಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ರಾಜ್ಯ ಸಚಿವ ಗುಲಾಬರಾವ್ ಪಾಟೀಲ್ ಅವರ ಕಾರಿನ ಚಾಲಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಚಾಲಕ ಹಾರ್ನ್ ಮಾಡಿ ದಾರಿ ಮಾಡಿಕೊಡುವಂತೆ ಕೇಳಿದರು. ಈ ವೇಳೆ ಶಿವಸೇನಾ ಮುಖಂಡ ಮತ್ತು ನೀರು ಸರಬರಜು ಮತ್ತು ನೈರ್ಮಲ್ಯ ಸಚಿವ ಪಾಟೀಲ್ ಅವರು ಕಾರಿನಲ್ಲಿ ಇರಲಿಲ್ಲ. ಬದಲಿಗೆ ಅವರ ಕುಟುಂಬವಿತ್ತು. ಕೆಲ ಸ್ಥಳೀಯರು ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿ, ವಾಗ್ವಾದ ನಡೆಸಿದರು. ಪ್ರಮುಖ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದಾಗ, ಮತ್ತೊಂದು ಗುಂಪು ಅಲ್ಲಿಗೆ ಬಂದಿತು. ಆಗ ಘರ್ಷಣೆ ಉಂಟಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.