ಗ್ರೀಕ್‌ನ ಆಯಂಟಿಕ್ಯಾಥೆರಾ ದ್ವೀಪದ ಬಳಿ ಸಾಗರಾಳದಲ್ಲಿ ಹಿಂದೆಂದೋ ಮುಳುಗಿದ್ದ ಹಡಗೊಂದನ್ನು ಹೆಲೆನಿಕ್ ರಾಯಲ್ ನೇವಿಯವರು 1900ರ ಸೆಪ್ಟೆಂಬರ್ 15ರಂದು ಪತ್ತೆ ಮಾಡಿದ್ದರು. ಅದರೊಳಗೆ ಬೆಲೆಬಾಳುವ ವಸ್ತುಗಳು ದೊರೆತವು. ಆದರೆ ಮುಂದೊಂದು ದಿನ ಇಡೀ ಜಗತ್ತನ್ನೇ ಆಳಬಹುದಾದ ಕಂಪ್ಯೂಟರ್ ಜನನಕ್ಕೆ ಕಾರಣವಾದ ಪುಟ್ಟ ಯಂತ್ರವೊಂದು ಪತ್ತೆಯಾಗಿತ್ತು.
ಹಿತ್ತಾಳೆ ಲೋಹದ 35 ಸೆಂ.ಮೀ. ಗಾತ್ರದ ಈ ಸಾಧನದೊಳಗೆ ಮೆಕ್ಯಾನಿಕಲ್ ಕೈಗಡಿಯಾರದಲ್ಲಿ ಹಲ್ಲುಗಳಿರುವ ಚಕ್ರಗಳಂತೆ ಸುಮಾರು 37 ಬಗೆಬಗೆಯ ಚಕ್ರಗಳಿದ್ದವು. ಅವುಗಳಲ್ಲಿ ಒಂದು ಚಕ್ರಕ್ಕೆ ಸುಮಾರು 223 ಹಲ್ಲುಗಳಿದ್ದವು. ಇವುಗಳು ಒಂದು ಮಿಲಿಮೀಟರ್‌ಗಿಂತ ಕಡಿಮೆ ಗಾತ್ರದ್ದು. ಇದನ್ನು ಖಗೋಳ ಅಧ್ಯಯನಕ್ಕೆ ಬಳಸಲಾಗುತ್ತಿತ್ತು. ಭವಿಷ್ಯದಲ್ಲಿ ಸಂಭವಿಸುವ ಸೂರ್ಯ ಮತ್ತು ಚಂದ್ರಗ್ರಹಣ ಮತ್ತು ಇತರ ಗ್ರಹಗಳ ಚಲನವಲನದ ಲೆಕ್ಕಾಚಾರಕ್ಕೆ ಬಳಸಲಾಗುತ್ತಿತ್ತು ಎಂದೆನ್ನಲಾಗಿದೆ. ಇದೇ ಅವಧಿಯಲ್ಲಿ ಜಗತ್ತಿನ ಅತ್ಯಂತ ಕಠಿಣ ಹಾಗೂ ಬೃಹತ್ ಸವಾಲುಗಳನ್ನು ಕ್ಷಣ ಮಾತ್ರದಲ್ಲಿ ಬಿಡಿಸಬಲ್ಲ ಸಾಮರ್ಥ್ಯವಿರುವ 'ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್' 'ವಿಲ್ಲೋ'ವನ್ನು ಗೂಗಲ್ ಅಭಿವೃದ್ಧಿಪಡಿಸಿದೆ ಎಂಬುದೂ ಸುದ್ದಿಯಾಗಿದೆ.
ಬೃಹತ್ ಲೆಕ್ಕಾಚಾರವನ್ನು ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ 10 ಸೆಪ್ಟಿಲಿಯನ್ (1ರ ಮುಂದೆ 25 ಸೊನ್ನೆಗಳು) ವರ್ಷಗಳನ್ನು ತೆಗೆದುಕೊಳ್ಳುವುದಾದರೆ, ಗೂಗಲ್‌ನ ವಿಲ್ಲೋ ಅದನ್ನು ಕೇವಲ 5 ನಿಮಿಷಗಳಲ್ಲಿ ಪೂರ್ಣಗೊಳಿಸಲಿದೆ ಎಂದು ಸ್ವತಃ ಗೂಗಲ್ ಹೇಳಿಕೊಂಡಿದೆ. ಅಂದರೆ ಬ್ರಹ್ಮಾಂಡಕ್ಕೆ ಎಷ್ಟು ವಯಸ್ಸಾಗಿದೆ ಎಂಬ ಲೆಕ್ಕಾಚಾರದಿಂದ ಹಿಡಿದು ಅನ್ಯಗ್ರಹ ಜೀವಿಗಳವರೆಗಿನ ಮಾಹಿತಿಯನ್ನೂ ಇದು ಅತ್ಯಂತ ವೇಗದಲ್ಲಿ ಪತ್ತೆ ಮಾಡುವ ಸಾಮರ್ಥ್ಯವಿದೆ ಎಂದೆನ್ನಲಾಗಿದೆ.
ಕ್ಯಾಲೆಕ್ಯುಲೇಟರ್‌ನಿಂದ ಕ್ವಾಂಟಮ್ ಚಿಪ್‌ನವರೆಗೂ
1642ರಲ್ಲಿ ಪ್ಯಾಸ್ಕಲ್ ಕಂಡುಹಿಡಿದ ಬೇಸಿಕ್ ಕ್ಯಾಲೆಕ್ಯುಲೇಟರ್‌ನಿಂದ, ಮೆಕ್ಯಾನಿಕಲ್ ಕಂಪ್ಯೂಟರ್ ಅನ್ವೇಷಣೆವರೆಗಿನ ಸುಮಾರು 400 ವರ್ಷಗಳು, ನಂತರದಲ್ಲಿ ಬಲ್ಬ್ ಅನ್ವೇಷಕ ಥಾಮಸ್ ಆಲ್ವಾ ಎಡಿಸನ್ ಅವರ ಎಲೆಕ್ಟ್ರಾನ್ ಅನ್ವೇಷಣೆಯಿಂದ ಪ್ರೇರಣೆ ಪಡೆದು ಚಿಪ್ ತಯಾರಿಕೆಯಿಂದಾಗಿ ಪ್ರೋಗ್ರಾಮಬಲ್ ಕಂಪ್ಯೂಟರ್‌ಗಳಲ್ಲಿ ಬಳಕೆಯಾಗುವ ಮೈಕ್ರೊ ಚಿಪ್‌ವರೆಗಿನ ಆವಿಷ್ಕಾರವರೆಗೆ ಕಂಪ್ಯೂಟರ್ ಹಲವು ಆವಿಷ್ಕಾರಗಳನ್ನು ಕಂಡಿದೆ. 20 ಅಣುಗಳ ಗಾತ್ರದಷ್ಟು ಪುಟ್ಟದಾದ ಹಾಗೂ ವೇಗದ ಕಂಪ್ಯೂಟರ್‌ಗಳಲ್ಲಿ ಬಳಕೆಯಾಗುವ ಮೈಕ್ರೊ ಚಿಪ್‌ಗಳೂ ಈಗ ಇತಿಹಾಸ ಸೇರುವ ಕಾಲ ಎದುರಾಗಿದೆ. ಕ್ವಾಂಟಮ್ ತಂತ್ರಜ್ಞಾನದಲ್ಲಿ ಕಳೆದ ಎರಡು ದಶಕಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಹಲವು ಕಂಪೆನಿಗಳಲ್ಲಿ ಯಾರು ಮೊದಲಿಗರು ಎಂಬುದಕ್ಕೆ 'ವಿಲ್ಲೋ' ಇದೀಗ ಗೂಗಲ್ ತೆರೆ ಎಳೆದಿದೆ.
ತಂತ್ರಜ್ಞಾನ ಬೆಳವಣಿಗೆ ಈಗ ನಾಗಾಲೋಟದಲ್ಲಿ ಓಡುತ್ತಿದೆ. ಕೃತಕ ಬುದ್ಧಿಮತ್ತೆಯು ಒಂದೆಡೆ ತನ್ನ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಹೊತ್ತಿಗೆ, ಅದರ ಕೆಲಸಕ್ಕೆ ಪೂರಕವಾದ ಚಿಪ್‌ಗಳ ಅಭಿವೃದ್ಧಿಯೂ ಪ್ರಗತಿ ಸಾಧಿಸುತ್ತಿದೆ. ಕಾರ್ಯಕ್ಷಮತೆ, ಧಕ್ಷತೆ ಮತ್ತು ಸಾಮರ್ಥ್ಯಗಳಲ್ಲಿ ವಿಲ್ಲೋ ಅತ್ಯಾಧುನಿಕವಾಗಿದೆ.
ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ವಿಶೇಷ ಪ್ರಾಸೆಸರ್‌ನಲ್ಲಿ ಅಳವಡಿಸಿದ ಚಿಪ್ ಈ ವಿಲ್ಲೋ. ಬೃಹತ್ ಮಾಹಿತಿಯನ್ನು ತ್ವರಿತವಾಗಿ ವಿಶ್ಲೇಷಿಸುವ ಸಾಮರ್ಥ್ಯವಿರುವ ಈ ಸಾಧನವನ್ನು ಗೂಗಲ್ ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಪಡಿಸಿದೆ. ಬೃಹತ್ ಮಾಹಿತಿಯನ್ನು ಅರಗಿಸಿಕೊಂಡು ನಿರಂತರ ಬೆಳವಣಿಗೆ ಕಾಣುತ್ತಿರುವ ಕೃತಕ ಬುದ್ಧಿಮತ್ತೆಯ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಿಲ್ಲೋವನ್ನು ಅಭಿವೃದ್ಧಿಪಡಿಸಿರುವುದಾಗಿ ಗೂಗಲ್ ಹೇಳಿದೆ. ಆ ಮೂಲಕ ತ್ವರಿತ ಹಾಗೂ ಬೃಹದಾಕಾರವಾಗಿ ಬೆಳೆಯುತ್ತಿರುವ ಕಂಪ್ಯೂಟಿಂಗ್ ತಂತ್ರಜ್ಞಾನ ಹೊಸ ಮೈಲಿಗಲ್ಲಿನತ್ತ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. ಜತೆಗೆ ಕಳೆದ 60 ವರ್ಷಗಳಲ್ಲಿ ಬಳಕೆಯಾಗಿರುವ ಸಾಂಪ್ರದಾಯಿಕ ಚಿಪ್‌ಗಳು ಭವಿಷ್ಯದಲ್ಲಿ ಕೇವಲ ನೆನಪಾಗಿಯಷ್ಟೇ ಉಳಿಯಲಿವೆ.
ವಿಲ್ಲೋದಂಥ ಕ್ವಾಂಟಮ್ ಕಂಪ್ಯೂಟಿಂಗ್‌ನಿಂದಾಗಿ ಜಗತ್ತಿನ ಬೆಳವಣಿಗೆ ನಿಗದಿಪಡಿಸುವುದರ ಜತೆಗೆ, ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಲಿದೆ. 40ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ಬೃಹತ್ ಚಿಪ್‌ಗಳಿರುವ ಕೋಣೆಯೊಳಗೆ ಹೋದರೆ, ಇಂಧನದ ಅತಿಯಾದ ಬಳಕೆಯಿಂದಾಗಿ ಉತ್ಪತ್ತಿಯಾಗುತ್ತಿದ್ದ ಬಿಸಿ ಶಾಖದಲ್ಲಿ ತಂತ್ರಜ್ಞರು ಬೆವರುತ್ತಿದ್ದರಂತೆ. ಆದರೆ ಹೊಸ ತಲೆಮಾರಿನ ಚಿಪ್‌ಗಳು ಇಂಧನವನ್ನು ಮಿತವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿವೆ.
ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಇನ್ನಷ್ಟು ಚುರುಕು
ಚಾಲಕರಹಿತ ವಾಹನಗಳ ನಿರ್ವಹಣೆ, ಚಿತ್ರಗಳನ್ನು ತ್ವರಿತವಾಗಿ ಗ್ರಹಿಸುವುದು, ಧ್ವನಿ ಆಧಾರಿತ ನೆರವು ಸೇರಿದಂತೆ ಹಲವು ಬಗೆಯ ರಿಯಲ್ ಟೈಂ ಮಾಹಿತಿಯನ್ನು ನಿರ್ವಹಿಸುವುದರಲ್ಲಿ ವಿಲ್ಲೋ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ಈಗಾಗಲೇ ಕೃತಕ ಬುದ್ಧಿಮತ್ತೆ ಆಧಾರಿತ ಉತ್ಪನ್ನಗಳನ್ನು ಹೊಂದಿರುವ ಗೂಗಲ್, ವಿಲ್ಲೋ ಎಂಬ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ ಅನ್ನು ಕ್ಲೌಡ್‌ನಲ್ಲಿರುವ ತನ್ನ ಬೃಹತ್ ಮಾಹಿತಿಯ ನಿರ್ವಹಣೆಯಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆ ಮೂಲಕ ತನ್ನ ಉತ್ಪನ್ನಗಳ ಪ್ರತಿಕ್ರಿಯೆ ವೇಗವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಕ್ಷೇತ್ರದಿಂದ ಹಣಕಾಸು ಕ್ಷೇತ್ರದವರೆಗೂ ಅತಿ ಬೇಡಿಕೆಯ ಕೃತಕ ಬುದ್ಧಿಮತ್ತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲೂ ಈ ಹೊಸ ಮಾದರಿಯ ಚಿಪ್ ನೆರವಾಗಲಿದೆ. ವಿಲ್ಲೋ ಚಿಪ್‌ಗೆ ಪೂರಕವಾದ ಹಾರ್ಡ್‌ವೇರ್ ಅಭಿವೃದ್ಧಿಗೂ ಗೂಗಲ್ ಕೈಹಾಕಿದೆ. ಆ ಮೂಲಕ ತನ್ನ ಅಗತ್ಯಗಳಿಗೆ ಬೇರೊಂದು ಕಂಪನಿಯನ್ನು ಅವಲಂಬಿಸುವುದನ್ನು ಆದಷ್ಟು ತಗ್ಗಿಸುವತ್ತ ಹೆಜ್ಜೆ ಇಟ್ಟಿದೆ.
ಈ ಚಿಪ್‌ನ ಬಳಕೆಯಿಂದ ಗೂಗಲ್ ಫೋಟೊ ಅಪ್ಲಿಕೇಷನ್ ಮೂಲಕ ಚಿತ್ರಗಳಲ್ಲಿರುವ ವ್ಯಕ್ತಿಗಳ ಗುರುತಿಸುವಿಕೆ, ಸ್ವಯಂಚಾಲಿತ ಟ್ಯಾಗಿಂಗ್, ಧ್ವನಿ ಆಧಾರಿತ ಆದೇಶಗಳು, ಧ್ವನಿಗ್ರಹಿಕೆ ಇತ್ಯಾದಿಗಳು ತಡೆರಹಿತವಾಗಿ ಹಾಗೂ ತ್ವರಿತವಾಗಿ ಕಾರ್ಯಗತಗೊಳಿಸಲು ಸಾಧ್ಯವಿದೆ. ಸಾಧನಗಳಲ್ಲಿರುವ ಸೆನ್ಸರ್‌ಗಳು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲೂ ಚಿಪ್ ನೆರವಾಗಲಿದೆ.
ಎನ್‌ವಿಡಿಯಾ ಹಾಗೂ ಇಂಟೆಲ್‌ನಂತ ಕಂಪೆನಿಗಳೂ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್‌ಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಹೀಗಾಗಿ ಭವಿಷ್ಯದ ಕಂಪ್ಯೂಟರ್‌ಗಳು ಹೆಚ್ಚು ವೇಗವಾಗುವುದರಿಂದ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗಿ, ಮನುಷ್ಯನ ಜೀವಿತಾವಧಿಯೇ ಹೆಚ್ಚಳವಾದರೂ ಅಚ್ಚರಿಪಡಬೇಕಾಗಿಲ್ಲ. ಇಲ್ಲವೇ ನೇಚರ್ ಪತ್ರಿಕೆ ಪ್ರಕಟಿಸಿದ ಲೇಖನ '2045ರಲ್ಲಿ ಸಾವಿಗೇ ಸಾವು' ಎಂಬುದು ನಿಜವಾದರೂ ಅಚ್ಚರಿ ಇಲ್ಲ ಎಂದು ತಂತ್ರಜ್ಞರು ಅಂದಾಜಿಸಿದ್ದಾರೆ. ಆದರೆ, ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ ಎಲ್ಲರ ಮನೆಗಳಲ್ಲಿರುವ ಕಂಪ್ಯೂಟರ್‌ಗಳಿಗೆ ತರುವ ಸವಾಲು ಕೂಡ ತಂತ್ರಜ್ಞರ ಮುಂದಿದೆ.
ಅಂದಹಾಗೆ ಆಯಂಟಿಕ್ಯಾಥೆರಾ ಮೆಕ್ಯಾನಿಸಂ ಸಾಧನವು ಗ್ರೀಸ್‌ನ ಅಥೆನ್ಸ್‌ನಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಮರುಸೃಷ್ಟಿ ಸಾಧನವನ್ನೂ ಇದರೊಂದಿಗೆ ಇಡಲಾಗಿದೆ.