ಮಂಜೇಶ್ವರ: ಬದಿಯಡ್ಕ ಹಾಗೂ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಒಬ್ಬಾಕೆ ಯುವತಿ ಹಾಗೂ ತಾಯಿ-ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಮಂಜೇಶ್ವರ ಕುಂಜತ್ತೂರು ಬಿ.ಎಸ್ ನಗರದ ಅಲಿಮಾ ಮಂಜಿಲ್‍ನ ಆಫ್ರಿನಾ(19)ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ಕುಂಡುಕೊಳಕೆಯಲ್ಲಿ ನಡೆಯುತ್ತಿರುವ ಬೀಚ್ ಫೆಸ್ಟ್ ಕಾಣಲು ಜ. 6ರಂದು ಮನೆಯಿಂದ ತೆರಳಿದ್ದು, ಅಲ್ಲಿಂದ ಯಾವುದೋ ಬೈಕಲ್ಲಿ ತೆರಳಿದ್ದ ಈಕೆ ವಾಪಸಾಗಿಲ್ಲ ಎಂದು ಮನೆಯವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ಘಟನೆಯಲ್ಲಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೇಳ ದರ್ಬೆತ್ತಡ್ಕ ನಿವಾಸಿ ರಾಮಚಂದ್ರ ಎಂಬವರ ಪತ್ನಿ ಮಾಲತಿ ಹಾಗೂ ಅವರ ಐದರ ಹರೆಯದ ಪುತ್ರ ಮನೀಶ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕದ ಆಸ್ಪತ್ರೆಗೆ ತೆರಳುವುದಾಗಿ ತಾಯಿ ಮತ್ತು ಪುತ್ರ ಮನೆಯಿಂದ ತೆರಳಿದ್ದು, ನಂತರ ವಾಪಸಾಗಿಲ್ಲ ಎಂದು ಮಹಿಳೆ ಸಹೋದರ ಕಮಲಾಕ್ಷ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.