ಸೋಲ್: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಬಂಧನಕ್ಕೆ ಅವರ ಭದ್ರತಾ ಮುಖ್ಯಸ್ಥರು ಭಾನುವಾರವೂ ಸಹಕರಿಸಲಿಲ್ಲ.
ಕಳೆದ ತಿಂಗಳು ಮಿಲಿಟರಿ ಆಡಳಿತ ಜಾರಿಗೊಳಿಸಿದ ಯೂನ್ ಅವರನ್ನು ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.
ಅವರ ಬಂಧನಕ್ಕೆ ಹೊರಡಿಸಿರುವ ವಾರಂಟ್ ಸೋಮವಾರ ಮಧ್ಯರಾತ್ರಿ ಕೊನೆಗೊಳ್ಳಲಿರುವ ಕಾರಣ, ಇದು ದೇಶದಲ್ಲಿ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಬಂಧನದ ವಾರಂಟ್ ಕಾನೂನುಬಾಹಿರವಾಗಿ ಎಂದು ಪ್ರತಿಪಾದಿಸಿದ್ದ ಯೂನ್ ಅವರ ವಕೀಲರ ವಾದವನ್ನು ಸೋಲ್ ನ್ಯಾಯಾಲಯ ತಿರಸ್ಕರಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸೋಲ್‌ನತ್ತ ಬ್ಲಿಂಕೆನ್: ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್ ಅವರು ಸೋಲ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಅವರು ದಕ್ಷಿಣ ಕೊರಿಯಾದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಮಪಾತದ ನಡುವೆಯೂ ಪ್ರತಿಭಟನೆ: ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಪರ ಮತ್ತು ವಿರುದ್ಧ ಬೆಂಬಲಿಗರು ಹಿಮಪಾತದ ನಡುವೆಯೂ ಭಾನುವಾರ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದರು.
ಯೂನ್ ಅವರನ್ನು ಬಂಧಿಸುವ ಸಾಧ್ಯತೆ ಇದ್ದಿದ್ದರಿಂದ ಭಾರಿ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಅಧ್ಯಕ್ಷರ ನಿವಾಸದ ಬಳಿ ಜಮಾಯಿಸಿ, ಪ್ರತಿಭಟಿಸಿದರು.
ಒಂದೆಡೆ ಯೂನ್ ಬೆಂಬಲಿಗರು ಅವರನ್ನು ವಾಗ್ದಂಡನೆಗೆ ಗುರಿಪಡಿಸಬಾರದು ಎಂದು ಅಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರೆ, ಇನ್ನೊಂದೆಡೆ ಕೆಲವರು, ಅವರನ್ನು ಬಂಧಿಸುವಂತೆ ಒತ್ತಾಯಿಸಿ ರ್‍ಯಾಲಿ ನಡೆಸಿದರು.