ವಾಷಿಂಗ್ಟನ್: ಗಡಿಪಾರು ಮಾಡಿದವರನ್ನು ವಾಪಸ್ ಕರೆಸಿಕೊಳ್ಳದ ರಾಷ್ಟ್ರಗಳಿಗೆ ಸುಂಕ ಮತ್ತು ನಿರ್ಬಂಧ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಚೀನಾ, 'ನಮ್ಮ ದೇಶದ ಪ್ರಜೆಗಳು ಎಂದು ದೃಢಪಟ್ಟವರನ್ನು ಮರಳಿ ಕರೆಸಿಕೊಳ್ಳಲು ಸಿದ್ಧವಿರುವುದಾಗಿ' ಹೇಳಿದೆ.
ಅಮೆರಿಕದಲ್ಲಿ ವಾಸಿಸಲು ಕಾನೂನು ಬದ್ಧವಾದ ದಾಖಲೆಗಳನ್ನು ಹೊಂದಿರದ ಚೀನಾದ ನೂರಾರು ಪ್ರಜೆಗಳನ್ನು ಅಮೆರಿಕವು ಐದು ವಿಮಾನಗಳ ಮೂಲಕ ಇತ್ತೀಚೆಗೆ ಅವರ ದೇಶಕ್ಕೆ ಕಳುಹಿಸಿತ್ತು. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡದೆ ಚೀನಾವು ಗಡಿಪಾರಿಗೆ ಸಹಕರಿಸದಿರುವುದರಿಂದ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಅಧಿಕಾರಿಗಳಿಗೆ ನಿರಾಶೆಯಾಗಿದೆ.
ಅಮೆರಿಕದಿಂದ ಗಡಿಪಾರಾಗಿರುವ ಪ್ರಜೆಗಳನ್ನು ಚೀನಾ ಒಪ್ಪಿಕೊಳ್ಳದಿದ್ದರೆ ವೀಸಾ ನಿರ್ಬಂಧ ಸೇರಿದಂತೆ ತೀವ್ರತರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.