ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬಾವಿಗೆ ಆನೆಯೊಂದು ಬಿದ್ದಿದೆ. ಆದರೆ ಆನೆಯನ್ನು ಮತ್ತೆ ಅದೇ ಪ್ರದೇಶದಲ್ಲಿ ಬಿಡುವುದಿಲ್ಲ ಎಂದು ಭರವಸೆ ನೀಡದ ಹೊರತು ರಕ್ಷಣೆಗೆ ಅನುಮತಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ, 'ಸಾಮಜ'ನ ರಕ್ಷಣೆ ಅರಣ್ಯ ಇಲಾಖೆಗೆ ಸಮಸ್ಯೆಯಾಗಿದೆ.
ಉರಂಙತ್ತಿರಿ ಎಂಬಲ್ಲಿ ಘಟನೆ ನಡೆದಿದ್ದು, ಆನೆಯನ್ನು ಇಲ್ಲಿಂದ ಸಾಗಿಸಿ ದಟ್ಟ ಅರಣ್ಯಕ್ಕೆ ಬಿಡುತ್ತೇವೆ ಎಂದು ಭರವಸೆ ನೀಡಿ ಎಂದು ಸ್ಥಳದ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳು ನಿಲಂಬೂರು ಡಿಎಫ್‌ಒ ಅವರನ್ನು ಒತ್ತಾಯಿಸಿದ್ದಾರೆ.
ಅಲ್ಲದೆ ಈ ಪ್ರದೇಶದಲ್ಲಿ ಆನೆಗಳು ಉಂಟು ಮಾಡಿರುವ ಹಾನಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಆನೆಯನ್ನು ಹಿಡಿದು ಬೇರೆ ಕಡೆ ಸಾಗಿಸುವುದು ಸುಲಭದ ಕೆಲಸವಲ್ಲ ಎಂದು ಡಿಎಫ್‌ಒ ಹೇಳಿದ್ದಾರೆ. ಅದಾಗ್ಯೂ ಆ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ.
ಬಾವಿಯ ಪಾರ್ಶ್ವವೊಂದನ್ನು ಕೆಡವಿದರೆ ಆನೆ ಸುಲಭವಾಗಿ ಹೊರಬರಲಿದೆ. ಬಳಿಕ ಅದನ್ನು ಸಮೀಪದ ಕಾಡಿಗೆ ತೆರಳುವಂತೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ, ಅರಣ್ಯಾಧಿಕಾರಿಗಳು ತೆರಳಿದ ಕೆಲವೇ ಕ್ಷಣಗಳಲ್ಲಿ ಆನೆ ವಾಪಸಾಗಲಿದೆ. ಹೀಗಾಗಿ ಅದನ್ನು ಬೇರೆ ದಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಡಿಎಫ್‌ಒಗೆ ತಿಳಿಸಿದರು. ಈ ಬೇಡಿಕೆಗೆ ಸ್ಪಂದಿಸಿದ ಡಿಎಫ್‌ಒ, ಜನರ ಸಮಸ್ಯೆಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.