ಕಾಸರಗೋಡು: ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಕೆ.ಎಂ.ಅಹ್ಮದ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಮಲಯಾಳಂ ಮನೋರಮಾದ ಛಾಯಾಚಿತ್ರಗ್ರಾಹಕ ಜಿತಿನ್ ಜೋಯಲ್ ಹಾರಿಮ್ ಅವರಿಗೆ ಲಭಿಸಿದೆ. ಈ ಬಾರಿ ಮಾಧ್ಯಮ ಪ್ರಶಸ್ತಿಯನ್ನು ಛಾಯಾಚಿತ್ರಗ್ರಾಹಕರಿಗೂ ವಿಸ್ತರಿಸಲಾಗಿದ್ದು, ಉತ್ತಮ ಸುದ್ದಿ ಚಿತ್ರಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಮಲಯಾಳ ಮನೋರಮಾ ಕಣ್ಣೂರು ಘಟಕದಲ್ಲಿ ಛಾಯಾಗ್ರಾಹಕರಾಗಿರುವ ಜಿತಿನ್ ವಯನಾಡಿನ ಚುರಲ್ ಹಿಲ್ಸ್‍ನಲ್ಲಿ ಭೂಕುಸಿತದಿಂದ ಪ್ರತ್ಯೇಕವಾದ ಕುಟುಂಬವೊಂದರ ಮಗುವನ್ನು ಸೇನೆಯು ಸುರಕ್ಷಿತವಾಗಿ ಇನ್ನೊಂದು ಬದಿಗೆ ಕರೆತರುತ್ತಿರುವ ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಛಾಯಾಚಿತ್ರ ಸಂಪಾದಕರಾದ ಮಧುರಾಜ್, ಆರ್.ಎಸ್.ಗೋಪನ್ ಮತ್ತು ಜಿ.ಪ್ರಮೋದ್ ಅವರನ್ನೊಳಗೊಂಡ ತೀರ್ಪುಗಾರರ ತಂಡ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. ಜನವರಿ 11ರಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ 10 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡ ಪ್ರಶಸ್ತಿಯನ್ನು ವಿತರಿಸಲಾಗುವುದು.