ಪುದುಚೇರಿ: ಬಂಧನದಿಂದ ಪಾರಾಗಲು ಯತ್ನಿಸಿದ ವೇಳೆ ಶ್ರೀಲಂಕಾ ನೌಕಾಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರು ಗಾಯಗೊಂಡಿದ್ದಾರೆ ಎಂದು ಪುದುಚೇರಿ ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಮೀನುಗಾರರಲ್ಲಿ ಒಬ್ಬರು ಕರೈಕಲ್ ಮೂಲದರಾಗಿದ್ದು, ಮತ್ತೊಬ್ಬರು ತಮಿಳುನಾಡಿನವರು.
ಇಬ್ಬರನ್ನು ಜಾಫ್ನಾನದ ಆಸ್ಪತ್ರಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಉಳಿದ 11 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ತೆಗೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತನ್ನ ಜಲಗಡಿಯಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು 13 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಮೀನುಗಾರರ ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ, ಮೀನುಗಾರರ ಬಿಡುಗಡೆ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕರೈಕಲ್ ಮೂಲದ 6 ಮತ್ತು ತಮಿಳುನಾಡಿನ 7 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಇದೇ ಪತ್ರದಲ್ಲಿ ರಂಗಸ್ವಾಮಿ ತಿಳಿಸಿದ್ದಾರೆ.