ಉಪ್ಪಳ: ಪೈವಳಿಕೆ ಕಾಯರ್ಕಟ್ಟೆಯಲ್ಲಿ ನಿಲ್ಲಿಸಿದ ಟಿಪ್ಪರ್ ಲಾರಿಯೊಳಗೆ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟ ಘಟನೆ ಇಂದು ಮುಂಜಾನೆ ವರದಿಯಾಗಿದೆ. ಮರಣದಲ್ಲಿ ನಿಗೂಢತೆ ಇದೆಯೆಂದು ನಾಗರಿಕರು ತಿಳಿಸಿದ್ದಾರೆ.
ಲಾರಿಯ ಡ್ರೈವಿಂಗ್ ಸೀಟಿನ ಬಳಿ ರಕ್ತದ ಕಲೆ, ಲಾರಿಯೊಳಗೆ ಬಿದಿರಿನ ದೊಣ್ಣೆ ಪತ್ತೆಯಾದ ಕಾರಣ ಮರಣದಲ್ಲಿ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿ ಬಾಯಾರ್ ಪದವು ಕ್ಯಾಂಪ್ಕೋ ಕೌಂಪೌಂಡ್ ಸಮೀಪದ ಮುಹ್ಮದ್ ಆಶೀಫ್ (29) ಎಂದು ಗುರುತಿಸಲಾಗಿದೆ.
ಮುಂಜಾನೆ 3 ಗಂಟೆಯ ವೇಳೆಗೆ ಫೋನ್ ಕರೆಯೊಂದು ಬಂದಾಗ ಇವರು ಮನೆಯಿಂದ ಟಿಪ್ಪರ್ ಲಾರಿ ಸಹಿತ ತೆರಳಿದ್ದರು. ಮುಹ್ಮದ್ ಆಶೀಫ್ ಗೆ ಬಂದ ಕರೆ ಯಾರದ್ದೆಂದು ಪತ್ತೆಹಚ್ಚುವ ನಿಟ್ಟಿನಲ್ಲಿ ಮಂಜೇಶ್ವರ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.