ನವದೆಹಲಿ : 'ಗೌರವಾನ್ವಿತ ಸಂಸ್ಥೆಯಾದ 22ನೇ ಕಾನೂನು ಆಯೋಗವನ್ನು, ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಸಂಬಂಧಿಸಿದಂತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏಕೆ ಕಟುವಾಗಿ ನಡೆಸಿಕೊಂಡಿದೆ' ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. 'ಆಯೋಗಕ್ಕೆ ಪೂರ್ಣಪ್ರಮಾಣದ ಸದಸ್ಯರನ್ನು ನೇಮಕ ಮಾಡಲಾಗಿರಲಿಲ್ಲ.
ಯುಸಿಸಿ ಕುರಿತ ವರದಿಯನ್ನು ಸಲ್ಲಿಸದೇ ಆಯೋಗದ ಅವಧಿ ಕೊನೆಗೊಂಡಿತು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಕುರಿತು 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, 'ಏಕರೂಪ ನಾಗರಿಕ ಸಂಹಿತೆ ನಿಯಮಗಳಿಗೆ ಅನುಮೋದನೆ ದೊರೆತಿದ್ದು, ಯುಸಿಸಿ ಜಾರಿಗೆ ಬರಲಿರುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು' ಎಂದು ಹೇಳಿದ ಹಿಂದೆಯೇ ಕಾಂಗ್ರೆಸ್ ಹೀಗೆ ಪ್ರತಿಕ್ರಿಯಿಸಿದೆ.
ಆಯೋಗವು 2023ರ ಜೂನ್ 14ರ ನೀಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಕಾನೂನು ಸಚಿವಾಲಯದ ಸಲಹೆ ಆಧರಿಸಿ ಯುಸಿಸಿ ಅನ್ನು ಮರುವಿಮರ್ಶೆ ಮಾಡುವುದಾಗಿ ಹೇಳಿತ್ತು. ಆದರೆ, 22ನೇ ಕಾನೂನು ಆಯೋಗದ ಅವಧಿ ಆಗಸ್ಟ್ 31, 2024ರಂದೇ ಮುಗಿದಿದೆ. ಆದರೆ, ಯುಸಿಸಿ ಕುರಿತು ಅದು ಅಂತಿಮ ವರದಿಯನ್ನೇ ಸಲ್ಲಿಸಲಾಗಿಲ್ಲ ಎಂದು ಹೇಳಿದರು.
ಸೆಪ್ಟೆಂಬರ್ 3, 2024ರಂದು 23ನೇ ಕಾನೂನು ಆಯೋಗದ ರಚನೆ ಘೋಷಿಸಲಾಯಿತು. ಆದರೆ, ಅದಕ್ಕೆ ಇನ್ನೂ ಪೂರ್ಣ ಸದಸ್ಯರ ನೇಮಕವಾಗಿಲ್ಲ. ಏಕೆ ಇಂತಹ ನಡೆ ಮೂಲಕ ಮೋದಿ ಸರ್ಕಾರ ಕಾನೂನು ಆಯೋಗವನ್ನು ಕಟುವಾಗಿ ನಡೆಸಿಕೊಳ್ಳುತ್ತಿದೆ ಎಂದಿದ್ದಾರೆ.