ಪಟ್ನಾ (PTI): ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಬಳಕೆಗಾಗಿ ಇಲ್ಲಿನ ಗಾಂಧಿ ಮೈದಾನದ ಬಳಿ ನಿಲ್ಲಿಸಿರುವ ಐಷಾರಾಮಿ ವಾಹನವು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಬಿಪಿಎಸ್‌ಸಿ ನಡೆಸಿದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಆರೋಪಿಸಿ ಗುರುವಾರ ಸಂಜೆಯಿಂದ ಪ್ರಶಾಂತ್ ಪ್ರತಿಭಟಿಸುತ್ತಿದ್ದಾರೆ.
ತಮ್ಮ ಬಳಕೆಗಾಗಿ ಗಾಂಧಿ ಮೈದಾನದ ಬಳಿ ನಿಲ್ಲಿಸಿಕೊಂಡಿರುವ ಐಷಾರಾಮಿ ವಾಹನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
'ವಾಹನದ ಬೆಲೆ ₹2 ಕೋಟಿ. ದಿನಕ್ಕೆ ₹25 ಲಕ್ಷ ಬಾಡಿಗೆಯಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಈ ವಾಹನವನ್ನು ನೀವೇ ಕೊಂಡೊಯ್ಯಿರಿ. ನನಗೆ ದಿನದ ಬಾಡಿಗೆಯಾಗಿ ₹25 ಲಕ್ಷ ನೀಡಿ. ಇದರೊಟ್ಟಿಗೆ ವಾಶ್‌ರೂಂಗಾಗಿ ಪರ್ಯಾಯ ಜಾಗ ಕಲ್ಪಿಸಿಕೊಡಿ' ಎಂದು ಹರಿಹಾಯ್ದಿದ್ದಾರೆ.
ಬಿಪಿಎಸ್‌ಸಿ ಆಕಾಂಕ್ಷಿಗಳ ಭವಿಷ್ಯಕ್ಕಿಂತ ಈ ಪ್ರಶ್ನೆ ಮುಖ್ಯವೇ ಎಂದ ಪ್ರಶಾಂತ್, 'ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಲು ನಿಮಗೆ ಸಾಧ್ಯವೇ?' ಎಂದು ಗರಂ ಆದರು.