ಚಂಡೀಗಢ: ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ 'ಎಮರ್ಜೆನ್ಸಿ' ಚಿತ್ರ ಇಂದು (ಶುಕ್ರವಾರ) ಬಿಡುಗಡೆಗೊಂಡಿದೆ. ಆದರೆ ಪಂಜಾಬ್‌ನ ಹಲವೆಡೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಪ್ರತಿಭಟನೆ ನಡೆಸಿದ್ದು, ಚಿತ್ರ ಪ್ರದರ್ಶನ ಕಾಣಲಿಲ್ಲ. ಚಿತ್ರದಲ್ಲಿ ಸಿಖ್‌ರ ಪಾತ್ರಗಳನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಎಸ್‌ಜಿಪಿಸಿ ಆರೋಪಿಸಿದೆ.
ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ಈ ಚಿತ್ರ ಬಿಡುಗಡೆಯಾಗದಂತೆ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್‌ಜಿಪಿಸಿ ಸದಸ್ಯ ಪರತಾಪ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲುಧಿಯಾನ, ಅಮೃತಸರ, ಪಟಿಯಾಲ ಮತ್ತು ಬಟಿಂಡಾದ ಅನೇಕ ಚಿತ್ರಮಂದಿರಗಳು ಸೇರಿದಂತೆ ರಾಜ್ಯದ ಹಲವೆಡೆ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಯಾಗಿಲ್ಲ. ಮಾಲ್‌ಗಳು ಸೇರಿದಂತೆ ಅನೇಕ ಚಿತ್ರಮಂದಿರಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
1975ರ ತುರ್ತು ಪರಿಸ್ಥಿತಿ ಕಥಾ ಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ನಟಿ ಕಂಗನಾ ರನೌತ್ ಕಾಣಿಸಿಕೊಂಡಿದ್ದಾರೆ. ಜಯಪ್ರಕಾಶ್ ನಾರಾಯಣ್ ಅವರ ಪಾತ್ರವನ್ನು ಹಿರಿಯ ನಟ ಅನುಪಮ್ ಕೇರ್ ನಿರ್ವಹಿಸಿದ್ದಾರೆ.
ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಜೀವನಾಧಾರಿತ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನದ ಹೊಣೆ ನಿಭಾಯಿಸಿರುವ ಕಂಗನಾ, ಮುಖ್ಯಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಹ ನಿರ್ಮಾಪಕಿಯಾಗಿ ಬಂಡವಾಳವನ್ನೂ ಹೂಡಿದ್ದಾರೆ.
ಚಿತ್ರದಲ್ಲಿ ಸಿಖ್ ಸಮುದಾಯದ ಬಗೆಗಿನ ನಿರೂಪಣೆ ಸೂಕ್ತವಾಗಿಲ್ಲ. ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಕೆಲ ಸಿಖ್ ಸಂಘಟನೆಗಳು ಸಿನಿಮಾ ಬಿಡುಗಡೆಗೆ ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದವು. ಹೀಗಾಗಿ, ಸಿನಿಮಾದಲ್ಲಿ ಕೆಲವು ಭಾಗಗಳಿಗೆ ಕತ್ತರಿ ಹಾಕಲಾಗಿದೆ.