ಬಿಜಾಪುರ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ನಕ್ಸಲರು ಕೊಂದು ಹಾಕಿದ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದ್ದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸುಕ್ಕೂ ಹಪ್ಕಾ ಎಂಬವರೇ ನಕ್ಸಲರಿಂದ ಕೊಲೆಯಾದ ವ್ಯಕ್ತಿ.
ಮಿರ್ತುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಲ್ಲೂರು ಗ್ರಾಮದ ಮನೆಯಿಂದ ಸುಕ್ಕೂ ಅವರನ್ನು ಗುರುವಾರ ಅಪಹರಿಸಿದ ನಕ್ಸಲರು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪ್ರಾಥಮಿಕ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಸಮೀಪದಲ್ಲೇ ಶವವನ್ನು ಎಸೆಯಲಾಗಿದೆ. ಶುಕ್ರವಾರ ಬೆಳಿಗ್ಗೆ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಕೊಲೆಯಾದ ವ್ಯಕ್ತಿ ಪೊಲೀಸ್ ಮಾಹಿತಿದಾರನಾಗಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಬರೆಯಲಾಗಿದ್ದ ಕರಪತ್ರವೂ ಲಭಿಸಿದೆ. ಭೈರಮಗಢ ಮಾವೋವಾದಿ ಪ್ರದೇಶ ಸಮಿತಿಯ ಕರಪತ್ರ ಅದಾಗಿತ್ತು ಎಂದು ಅವರು ಹೇಳಿದ್ದಾರೆ.
ಕೊಲೆಗಾರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಬಸ್ತಾರ್ ಪ್ರದೇಶದಲ್ಲಿ 68 ನಾಗರಿಕರು ಬಲಿಯಾಗಿದ್ದಾರೆ.