ಮುಳ್ಳೇರಿಯ: ಮುಳಿಯಾರು, ಕಾರಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಂಡುಬರುತ್ತಿದ್ದ ಚಿರತೆ ಸಂಚಾರದ ಭೀತಿ ಬೇಡಡ್ಕ ಪಂಚಾಯಿತಿಯ ಕೊಳತ್ತುರು, ಕಡುವನತ್ತೊಟ್ಟಿ, ಶಂಕರಂಕಾಡ್ ವರೆಗೂ ವ್ಯಾಪಿಸಿದೆ. ಶಂಕರಂಕಾಡ್ ನಿವಾಸಿ ಕೃಷ್ಣ ಕುಮಾರ್ ಎಂಬವರ ರಬ್ಬರ್ ತೋಟದಲ್ಲಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ನೀಡಿದ ಮಾಹಿತಿಯನ್ವಯ ಬಂದಡ್ಕ ರೇಂಜ್ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದರೂ, ಚಿರತೆ ಪತ್ತೆಯಾಗಿರಲಿಲ್ಲ. ಅರಣ್ಯಾಧಿಕಾರಿಗಳು ಈ ಪ್ರದೇಶದ ಜನತೆಗೆ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಈ ಮಧ್ಯೆ ಇರಿಯಣ್ಣಿ ಮಂಡಕ್ಕಾಡ್‍ನ ಜನವಾಸ ಪ್ರದೆಸಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಚಿರತೆ ಹಾಗೂ ಕಾಡುಕೋಣ ಸೆಣಸಾಡಿಕೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಿರತೆ ಮತ್ತು ಕಾಡುಕೋಣ ಸೆಣಸಾಡುವ ಮಧ್ಯೆ ಕಾಡುಕೋಣದ ಅರಚಾಟ ಹಾಗೂ ಚಿರತೆ ಘರ್ಜನೆ ಕೇಳಿಬಂದಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಕಾಡುಕೋಣದ ಗೊರಸು ಹಾಗೂ ಚಿರತೆ ಪಂಜದ ಗುರುತು ಲಭ್ಯವಾಗಿರುವುದಲ್ಲದೆ, ಕುರುಚಲು ಪೊದೆ ಚಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು. ಆಹಾರಕ್ಕಾಗಿ ಸಣ್ಣ ಗಾತ್ರದ ಪ್ರಾಣಿಗಳು ಲಭಿಸದಾದಾಗ ಕಾಡುಕೋಣದ ಮೇಲೆ ಚಿರತೆ ದಾಳಿ ನಡೆಸಿರುವ ಸಾಧ್ಯತೆಯಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.