ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿಗಳ ಹತ್ತಿರದ ಸಂಬಂಧಿಗಳನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡದೆ ಇರುವ ಪ್ರಸ್ತಾವವನ್ನು ಬೆಂಬಲಿಸಿರುವ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರು, ಈ ಪ್ರಸ್ತಾವವನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದ್ದಾರೆ.
'ಮಾಡಿ ತೋರಿಸುವುದಕ್ಕಿಂತ ಹೇಳುವುದು ಸುಲಭ. ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿ ಆಗಿರುವವರ ಸಂಬಂಧಿಕರು ಅಲ್ಲಿಯೇ ವಕೀಲರಾಗಿ ಕೆಲಸ ಮಾಡುವುದನ್ನು ಕೂಡ ನಿಷೇಧಿಸಲು ಇದುವರೆಗೆ ನಮಗೆ ಆಗಿಲ್ಲ... ವ್ಯವಸ್ಥೆಯೇ ಹೆಚ್ಚು ಬಲಿಷ್ಠ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ' ಎಂದು ಸಿಂಘ್ವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ್ತಿಗೆ ಪರಿಗಣಿತವಾಗಿರುವ ನ್ಯಾಯಮೂರ್ತಿಗಳು ಇರುವ ಹಾಲ್‌ನಲ್ಲಿ ಕೊಲಿಜಿಯಂ ಸದಸ್ಯರು ಮಾರುವೇಷದಲ್ಲಿ ಕೂರಬೇಕು, ವಕೀಲರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಬದಲು ಅವರನ್ನು ಕೂಡ ಮಾರುವೇಷದಲ್ಲಿ ಪರಿಶೀಲಿಸಬೇಕು ಎಂಬುದಾಗಿ ತಾವು ದಶಕಗಳ ಹಿಂದೆ ಬರೆದಿದ್ದುದಾಗಿ ಸಿಂಘ್ವಿ ಹೇಳಿದ್ದಾರೆ.
ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಹತ್ತಿರದ ಸಂಬಂಧಿಗಳನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬಾರದು ಎಂಬ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ಈಚೆಗೆ ವರದಿ ಮಾಡಿದೆ.