ಕಾಸರಗೋಡು : ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆಗೆ ಆದ್ಯತೆ ನೀಡುವಂತೆ ಕಾಸರಗೋಡು ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ದೇಶಿಸಲಾಯಿತು. ಎರ್ನಾಕುಳಂ ಕಾಲೂರ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಉಮಾ ಥಾಮಸ್ ಬಿದ್ದು ಗಂಭೀರ ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಭದ್ರತಾ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ನಗರ ಹಾಗೂ ಆಸುಪಾಸು ಮೀನು ಮತ್ತು ಮಾಂಸದ ದರದಲ್ಲಿ ಭಾರೀ ಏರಿಕೆ ಬಗ್ಗೆ ಸಂಬಂಧಪಟ್ಟವರು ಗಮನನಹರಿಸಿ ಬೆಲೆ ಏಕೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮೀನು ಮತ್ತು ಮಾಂಸದ ವ್ಯಾಪಾರಿಗಳು ಈ ಬಗ್ಗೆ ದೂರು ನೀಡಿದ್ದು, ಕೆಲವೆಡೆ ಹೆಚ್ಚಿನ ದರ ನಿಗದಿಪಡಿಸಿದ್ದರೆ, ಇನ್ನು ಕೆಲವೆಡೆ ಅತ್ಯಂತ ಕಡಿಮೆಗೆ ಮಾರಾಟ ನಡೆಸಲಾಗುತ್ತಿದೆ. ಇದರಿಂದ ವ್ಯಾಪಾರಕ್ಕೆ ಹೆಚ್ಚಿನ ಸಮಸ್ಯೆ ಎದುರಾಗುತ್ತಿರುವುದಾಗಿ ವ್ಯಾಪಾರಿಗಳು ದೂರಿದ್ದರು. ತಾಲೂಕಿನ ಪ್ರಮುಖ ಕೇಂದ್ರಗಳು ಹಾಗೂ ಆಟದ ಮೈದಾನಗಳಲ್ಲಿ ಅತಿಕ್ರಮಣ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಚೆಮ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್, ವಿವಿಧ ರಾಜಕೀಯ ಪ್ರತಿನಿಧಿಗಳಾದ ಮುಹಮ್ಮದ್ ಹನೀಫಾ, ಹಸೈನಾರ್ ನುಳ್ಳಿಪಾಡಿ, ನ್ಯಾಷನಲ್ ಅಬ್ದುಲ್ಲಾ ಮೊದಲಾದವರು ಪಾಲ್ಗೊಂಡಿದ್ದರು. ಕಾಸರಗೋಡು ತಹಸೀಲ್ದಾರ್ ಅಜಯನ್ ಸ್ವಾಗತಿಸಿದರು.