ನವದೆಹಲಿ: ಛತ್ತೀಸಗಢದ ಬಸ್ತಾರ್‌ನಲ್ಲಿ ನಡೆದಿರುವ ಯುವ ಪತ್ರಕರ್ತರೊಬ್ಬರ ಹತ್ಯೆ ಪ್ರಕರಣದ ಬಗ್ಗೆ ಗಂಭೀರ ತನಿಖೆ ಆಗಬೇಕು ಎಂದು ಭಾರತೀಯ ಪ್ರೆಸ್ ಕ್ಲಬ್ (ಪಿಸಿಐ), ಭಾರತೀಯ ಸಂಪಾದಕರ ಕೂಟ ಸೇರಿದಂತೆ ಪತ್ರಕರ್ತರ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಮುಕೇಶ್ ಚಂದ್ರಕರ್ (31) ಅವರು ರಸ್ತೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ ನಂತರ ಅವರ ಹತ್ಯೆ ನಡೆದಿದೆ.
ಮುಕೇಶ್ ಅವರು ಜನವರಿ 1ರಿಂದ ನಾಪತ್ತೆ ಆಗಿದ್ದರು. ಅವರನ್ನು ಹತ್ಯೆ ಮಾಡಲಾಗಿದ್ದು, ಮೃತದೇಹವು ಬಿಜಾಪುರದಲ್ಲಿ ಗುತ್ತಿಗೆದಾರರೊಬ್ಬರಿಗೆ ಸೇರಿದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶುಕ್ರವಾರ ಪತ್ತೆಯಾಗಿದೆ. ಮುಕೇಶ್ ಅವರು 'ಬಸ್ತಾರ್ ಜಂಕ್ಷನ್' ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಹೊಂದಿದ್ದರು. ಅಲ್ಲದೆ, ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಿದ್ದರು.
ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಐ ಮತ್ತು ಇಂಡಿಯನ್ ವಿಮೆನ್ ಪ್ರೆಸ್ ಕಾಪ್ಸ್ (ಐಡಬ್ಲ್ಯುಪಿಸಿ) 'ಬಸ್ತಾರ್‌ನಲ್ಲಿ ಪತ್ರಕರ್ತರ ಮೇಲೆ ದಾಳಿ ನಡೆಯುವುದು ಹಾಗೂ ಪತ್ರಕರ್ತರ ಹತ್ಯೆಗಳು ಹೊಸದಲ್ಲ. ಆದರೆ ಯಾವ ಭೀತಿಯೂ ಇಲ್ಲದೆ ಇಂತಹ ಕೃತ್ಯಗಳು ನಡೆಯುವುದನ್ನು ಒಪ್ಪಿಕೊಳ್ಳಲಾಗದು. ಇಂಥವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು' ಎಂದು ಹೇಳಿವೆ.
ಪತ್ರಕರ್ತರ ರಕ್ಷಣೆಗೆ ಪ್ರತ್ಯೇಕ ಕಾನೂನು ಬೇಕು ಎಂದು ಸ್ಥಳೀಯ ಪತ್ರಕರ್ತರು ಬಹುಕಾಲದಿಂದ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರವು ಈ ಬಗ್ಗೆ ತಕ್ಷಣವೇ ಗಮನ ಹರಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಡಿಯುಜೆ, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ (ಎನ್‌ಎಜೆ), ಆಂಧ್ರಪ್ರದೇಶ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಕೇರಳ ಕಾರ್ಯನಿರತ ಪತ್ರಕರ್ತರ ದೆಹಲಿ ಘಟಕ ಕೂಡ ಹತ್ಯೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿವೆ.