ಕೊಲಂಬೊ: ಆಸ್ತಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರ ಮಗ ಯೊಶಿತಾ ರಾಜಪಕ್ಸ ಅವರನ್ನು ಇಲ್ಲಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
2015ರಲ್ಲಿ ಮಹಿಂದ ರಾಜಪಕ್ಸ ಅವರು ಅಧ್ಯಕ್ಷರಾಗಿದ್ದ ವೇಳೆ ಆಸ್ತಿ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪವನ್ನು ಯೊಶಿತಾ ಎದುರಿಸುತ್ತಿದ್ದಾರೆ.
ಶನಿವಾರ ಅವರ ತವರು ರಾಜ್ಯವಾದ ಬೆಲಿಯಟ್ಟಾದಿಂದಲೇ ಬಂಧಿಸಲಾಯಿತು.
ಮಹಿಂದ ಅವರ ಮೂರು ಗಂಡುಮಕ್ಕಳಲ್ಲಿ ಎರಡನೆಯವರಾದ ಯೊಶಿತಾ, ನೌಕಾಪಡೆಯ ಮಾಜಿ ಅಧಿಕಾರಿಯೂ ಆಗಿದ್ದಾರೆ.
ಶ್ರೀಲಂಕಾದ ಧಾರ್ಮಿಕ ಕೇಂದ್ರವಾದ ಕತಾರಾಗಾಮಾದಲ್ಲಿ ಆಸ್ತಿ ಖರೀದಿಸಿದ ಸಂಬಂಧ ಯೊಶಿತಾ ಅವರ ಚಿಕ್ಕಪ್ಪ ಹಾಗೂ ಮಾಜಿ ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರನ್ನು ಕಳೆದ ವಾರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
2005ರಿಂದ 2015ರವರೆಗೆ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಸ ಅವರ ಆಡಳಿತದಲ್ಲಿ ನಡೆದ ಅಕ್ರಮಗಳ ಕುರಿತಂತೆ ಹೊಸ ಸರ್ಕಾರವು ತನಿಖೆಗೆ ಒಳಪಡಿಸಿದೆ.