ನವದೆಹಲಿ: ಬೆಂಗಳೂರಿನ ಉಪನಗರ ವರ್ತುಲ ರಸ್ತೆ ಯೋಜನೆಯ (ಎಸ್‌ಟಿಆರ್‌ಆರ್) ಐದು ಪ್ಯಾಕೇಜ್‌ಗಳ (144 ಕಿ.ಮೀ) ₹4,750 ಕೋಟಿಯ ಕಾಮಗಾರಿಯ ಪ್ರಸ್ತಾವನೆಯನ್ನು 'ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ'ಯ ಮುಂದೆ ಮಂಡಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಯ ನೀಡಿದರು.
ಬೆಂಗಳೂರು ನಗರದ ವಾಹನ ದಟ್ಟಣೆ ತಗ್ಗಿಸುವ ಈ ಯೋಜನೆ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗಡ್ಕರಿ ಅವರೊಂದಿಗೆ ಬುಧವಾರ ಚರ್ಚಿಸಿದರು. ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಶೀಘ್ರ ಚಾಲನೆ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದರು.
ಉಪನಗರ ವರ್ತುಲ ರಸ್ತೆ ಯೋಜನೆಯು 2013ರಲ್ಲಿಯೇ ಚಾಲನೆ ಪಡೆದಿತ್ತು. ಆದರೆ, ನಾನಾ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತ್ತು. ಬೆಂಗಳೂರು ಸುತ್ತಮುತ್ತ ಇರುವ ಎಂಟು ಕೈಗಾರಿಕಾ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.
ನಾಲ್ಕರಿಂದ ಆರು ಪಥಗಳ ಈ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಹಾಗೂ ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ಹೈವೇಯನ್ನು ಕೂಡುತ್ತದೆ. ಜತೆಗೆ ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ.
ಈ ಉಪನಗರ ವರ್ತುಲ ರಸ್ತೆಯನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಂಪರ್ಕಗೊಳಿಸಲಾಗುವುದು. ಕೈಗಾರಿಕೆಗಳಿಗೆ ಸರಕು ಸರಂಜಾಮು ಸಾಗಿಸುವ ಯಾವುದೇ ಬೃಹತ್ ವಾಹನ ಬೆಂಗಳೂರು ನಗರದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವುದೇ ಈ ಯೋಜನೆಯ ಉದ್ದೇಶ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಈ ಯೋಜನೆಯಿಂದ ಹೆಚ್ಚು ಲಾಭವಾಗಲಿದೆ.
ಭೂಸಂತ್ರಸ್ತರಿಗೆ ಶೀಘ್ರ ಪರಿಹಾರ:
'ಎಂಟು ವರ್ಷಗಳಿಂದ ಬಾಕಿ ಇದ್ದ ಭೂಸ್ವಾಧೀನ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ಪಾವತಿ ಮಾಡಲು ಸಚಿವ ಗಡ್ಕರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಮನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನುಕೂಲವಾಗಲಿದೆ' ಎಂದು ಕುಮಾರಸ್ವಾಮಿ ಅವರು ಹೇಳಿದರು.
'4ರಿಂದ 6 ಪಥ ಹೊಂದಿರುವ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಯಾವುದೇ ಅಡೆತಡೆಗಳಿಲ್ಲದೆ ಸಂಚಾರ ಸೌಲಭ್ಯ ಕಲ್ಪಿಸಲಿದೆ. ಬೆಂಗಳೂರು ಸುತ್ತಲಿನ ಉಪ ನಗರಗಳ ಮೂಲಕ ರಸ್ತೆ ಹಾದು ಹೋಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ' ಎಂದು ಸಚಿವರು ತಿಳಿಸಿದರು.
ಈ ಯೋಜನೆಯಡಿ ₹17 ಸಾವಿರ ಕೋಟಿ ಮೊತ್ತದಲ್ಲಿ 285 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ದಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಪ್ಯಾಕೇಜ್ 1ರ (42 ಕಿ.ಮೀ), ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ ಕಾಮಗಾರಿ (37 ಕಿ.ಮೀ) ಈಗಾಗಲೇ ಪೂರ್ಣಗೊಂಡಿದೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಯ 20 ಕಿ.ಮೀ. ಕಾಮಗಾರಿ ಶೇ 42ರಷ್ಟು ಪ್ರಗತಿ ಸಾಧಿಸಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ 6 ಕಿ.ಮೀ ಕಾಮಗಾರಿ ಬಹುತೇಕ ಮುಗಿದಿದೆ.
ಐದು ಪ್ಯಾಕೇಜ್‌ಗಳು
*ಮೊದಲ ಪ್ಯಾಕೇಜ್: ನೆಲಮಂಗಲ ತಾಲ್ಲೂಕಿನ ಓಬಳಾಪುರದಿಂದ ಮಾಗಡಿ ತಾಲ್ಲೂಕಿನ ಸೋಮಕ್ಕನಮುತ್ತದ ವರೆಗೆ. ಒಟ್ಟು 46.30 ಕಿ.ಮೀ. ಟೆಂಡರ್ ಮೊತ್ತ ₹1,419 ಕೋಟಿ.
*ಎರಡನೇ ಪ್ಯಾಕೇಜ್: ಸೋಮಕ್ಕನಮುತ್ತದಿಮದ ಕುಣಿಗಲ್‌ವರೆಗೆ. 32.7 ಕಿ.ಮೀ. ಟೆಂಡರ್ ಮೊತ್ತ ₹825 ಕೋಟಿ.
*ಮೂರನೇ ಪ್ಯಾಕೇಜ್: ಕುಣಿಗಲ್‌ನಿಂದ ಕನಕಪುರ ತಾಲ್ಲೂಕಿನ ತಟ್ಟೆಕೆರೆ ವರೆಗೆ 33.64 ಕಿ.ಮೀ. ಕಾಮಗಾರಿ. ಟೆಂಡರ್ ಮೊತ್ತ ₹978 ಕಿ.ಮೀ.
*ನಾಲ್ಕನೇ ಪ್ಯಾಕೇಜ್: ತಟ್ಟೆಕೆರೆಯಿಂದ ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿವರೆಗೆ 8.34 ಕಿ.ಮೀ. ಕಾಮಗಾರಿ. ಟೆಂಡರ್ ಮೊತ್ತ ₹1,018 ಕೋಟಿ.
*ಐದನೇ ಪ್ಯಾಕೇಜ್: ಬಗ್ಗನದೊಡ್ಡಿಯಿಂದ ತಮಿಳುನಾಡಿನ ಹೊಸೂರು ತಾಲ್ಲೂಕಿನ ಎಸ್.ಮುದುಗದಪಲ್ಲಿವರೆಗೆ 23.27 ಕಿ.ಮೀ. ಕಾಮಗಾರಿ. ಟೆಂಡರ್ ಮೊತ್ತ ₹507 ಕೋಟಿ.