ಲಖನೌ: ಲಂಚ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಾದ ಪಂಚಾಯಿತಿ ಕಾರ್ಯದರ್ಶಿಯೊಬ್ಬರು, ಬದುಕಿರುವ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣಪತ್ರ ವಿತರಿಸಿರುವ ವಿಲಕ್ಷಣ ಪ್ರಕರಣ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ವರದಿಯಾಗಿದೆ.
ವರದಿಗಳ ಪ್ರಕಾರ, ಜಿಲ್ಲೆಯ ಅತ್ವಾ ಗ್ರಾಮದ ನಿವಾಸಿ ವಿಶ್ವನಾಥ್ ಕುಮಾರ್ ಎಂಬವರು ತಮ್ಮ ಪತ್ನಿ ಶಾಂತಿ ದೇವಿ ಅವರ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಶಾಂತಿ ದೇವಿ ಅವರು 15 ದಿನಗಳ ಹಿಂದೆ ಮೃತಪಟ್ಟಿದ್ದರು.
ಒಂದೆರಡು ದಿನಗಳ ಹಿಂದೆ ಕುಮಾರ್ ಅವರ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ಇದರಿಂದ ಬೇಸರಗೊಂಡ ಅವರು, ಪಂಚಾಯಿತಿ ಅಧಿಕಾರಿಯ ಕ್ರಮದ ವಿರುದ್ಧ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಮಂಗಳವಾರ ದೂರು ನೀಡಿದ್ದರು.
'ದಿವಂಗತ ಪತ್ನಿಯ ಮರಣಪ್ರಮಾಣ ಪತ್ರ ನೀಡಲು ಪಂಚಾಯಿತಿ ಕಾರ್ಯದರ್ಶಿ ಸರಿತಾ ದೇವಿ ಅವರು ₹ 2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ನಿರಾಕರಿಸಿದ್ದಕ್ಕೆ, ನನ್ನನ್ನು ಪ್ರತಿ ದಿನ ಪಂಚಾಯಿತಿಗೆ ಅಲೆಯುವಂತೆ ಮಾಡಿದ್ದರು' ಎಂದು ಆರೋಪಿಸಿದ್ದರು.
ದೂರಿನ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಪಂಚಾಯಿತಿ ಕಾರ್ಯದರ್ಶಿಯ ಅಮಾನತಿಗೆ ಆದೇಶಿಸಿದ್ದಾರೆ. ಹಾಗೆಯೇ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.
'ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಜೀವಂತ ಇರುವವರನ್ನು ಮೃತಪಟ್ಟಿದ್ದಾರೆ ಎಂದು ಪ್ರಮಾಣಪತ್ರ ನೀಡುವುದು ಗಂಭೀರ ವಿಚಾರ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ' ಎಂದು ಜಿಲ್ಲೆಯ ಉನ್ನತಾಧಿಕಾರಿಯೊಬ್ಬರು ಬುಧವಾರ ಪ್ರತಿಕ್ರಿಯಿಸಿದ್ದಾರೆ.
ಹಿರಿಯ ಅಧಿಕಾರಿಗಳ ನಿರ್ದೇಶನದ ಬಳಿಕ ಕುಮಾರ್ ಅವರಿಗೆ ಕೊನೆಗೂ ಸರಿಯಾದ ಪ್ರಮಾಣಪತ್ರ ಸಿಕ್ಕಿದೆ.