ನವದೆಹಲಿ: ದೇಶದ ಪ್ರಮುಖ ಟ್ರಾವೆಲ್ ಬುಕ್ಕಿಂಗ್ ಕಂಪನಿ ಓಯೊ ತನ್ನ ಚೆಕ್ ಇನ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅವಿವಾಹಿತ ಜೋಡಿಗಳಿಗೆ ಅವಕಾಶ ಇಲ್ಲ ಎಂದು ಹೇಳಿದೆ.
ಸದ್ಯ ಮೀರತ್‌ನಲ್ಲಿ ಈ ನಿಯಮ ಜಾರಿಯಾಗಿದ್ದು, ಈ ಹೊಸ ನಿಯಮದನ್ವಯ, ಹೋಟೆಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ಪುರಾವೆಯನ್ನು ಒದಗಿಸಬೇಕು.
ಆನ್‌ಲೈನ್ ಬುಕ್ಕಿಂಗ್‌ಗೂ ಈ ನಿಯಮ ಅನ್ವಯವಾಗಲಿದೆ.
ತನ್ನ ಎಲ್ಲಾ ಪಾಲುದಾರ ಹೋಟೆಲ್‌ಗಳಿಗೆ ಓಯೊ ಈ ಬಗ್ಗೆ ಮಾಹಿತಿ ರವಾನಿಸಿದೆ. ಕೂಡಲೇ ಇದನ್ನು ಜಾರಿಗೆ ತರಬೇಕು ಎಂದು ಮೀರತ್‌ನ ಪಾಲುದಾರ ಹೋಟೆಲ್‌ಗಳಿಗೆ ಕಂಪನಿ ಸೂಚನೆ ನೀಡಿದೆ.
ಸ್ಥಳೀಯ ಸಾಮಾಜಿಕ ಸಂವೇದನೆಯನ್ನು ಗೌರವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಓಯೊ ಹೇಳಿದೆ. ಪ್ರತಿಕ್ರಿಯೆ ಗಮನಿಸಿ ಬೇರೆ ನಗರಗಳಿಗೆ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ.
'ಸಾರ್ವಜನಿಕರಿಂದ ಬಂದ ಪ್ರಕ್ರಿಯೆ ಆಧರಿಸಿ ಮೀರತ್‌ನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೇರೆ ನಗರದಲ್ಲೂ ನಾಗರಿಕರಿಂದ ಇಂಥಹದ್ದೇ ಬೇಡಿಕೆ ಬಂದಿದೆ' ಎಂದು ಅವರು ತಿಳಿಸಿದ್ದಾರೆ.
'ಓಯೊ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಜೊತೆಗೆ, ಕಾನೂನು ಜಾರಿ ಮತ್ತು ನಾಗರಿಕರನ್ನು ಆಲಿಸುವ ಮತ್ತು ಅವರ ಜೊತೆ ಕೆಲಸ ಮಾಡುವ ಜವಾಬ್ದಾರಿಯೂ ಇದೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ಆಗಾಗ್ಗೆ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ' ಎಂದು ಓಯೊದ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಹೇಳಿದ್ದಾರೆ.