ಪಟ್ನಾ: ಎನ್‌ಡಿಐ ಮೈತ್ರಿಕೂಟ ತೊರೆಯುತ್ತಿರುವ ಸಾಧ್ಯತೆಯನ್ನು ತಳ್ಳಿಹಾಕಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಜೊತೆಗಿನ ತಮ್ಮ ಮೈತ್ರಿ ಬಹಳ ದೀರ್ಘಕಾಲದಿಂದ ಇದೆ ಎಂದಿದ್ದಾರೆ.
ಆರ್‌ಜೆಡಿ-ಕಾಂಗ್ರೆಸ್ ಜೊತೆಗಿನ ತಮ್ಮ ಎರಡು ಅಲ್ಪಾವಧಿಯ ಮೈತ್ರಿಯನ್ನು 'ತಪ್ಪು' ಎಂದು ಬಣ್ಣಿಸಿದ ಜೆಡಿಯು ವರಿಷ್ಠ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪಡೆದಿದ್ದ ಬೆಂಬಲವನ್ನು ನೆನಪಿಸಿಕೊಂಡರು.
'ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡಿದ ಗೌರವಾನ್ವಿತ ಅಟಲ್ ಜಿ ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ತೋರಿಸುತ್ತಿದ್ದರು. ಅವರ ಕಾಲದಲ್ಲಿ ನನ್ನ ಪ್ರಸ್ತಾಪಗಳಿಗೆ ಯಾವುದೇ ತೊಂದರೆ ಇಲ್ಲದೆ ಅನುಮತಿ ಸಿಗುತ್ತಿತ್ತು ಎಂದು ನಿತೀಶ್ ಕುಮಾರ್ ಅವರು ವೈಶಾಲಿ ಜಿಲ್ಲೆಯಲ್ಲಿ 'ಪ್ರಗತಿ ಯಾತ್ರೆ'. ಸಂದರ್ಭ ಸುದ್ದಿಗಾರರಿಗೆ ತಿಳಿಸಿದ್ದಾರೆ.
2005ರಲ್ಲಿ ಬಿಹಾರದಲ್ಲಿ ಎನ್‌ಡಿಎ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ ನಾನು ಸಿಎಂ ಆಗಬೇಕು ಎಂಬುದು ವಾಜಪೇಯಿ ಅವರ ಆಶಯವಾಗಿತ್ತು ಎಂದು ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ನಿತೀಶ್ ಸ್ಮರಿಸಿದ್ದಾರೆ.
'ಹಾಗಾಗಿ, ನಾನೇಕೆ ಬಿಜೆಪಿ ಜೊತೆ ಉಳಿಯುವುದಿಲ್ಲ. ನಮ್ಮ ಪಕ್ಷದ ಕೆಲವರು ಕೆಲವೊಂದು ಬಾರಿ ಆರ್‌ಜೆಡಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದ್ದರು. ಅವನ್ನೆಲ್ಲ ನಾನು ಸರಿಪಡಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.
ಒಂದು ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಸ್ಪಷ್ಟ ನಿಲುವಿನಿಂದಾಗಿ ನಿತೀಶ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಕೇಳಲಾದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ನಿತೀಶ್ ಕುಮಾರ್ ಅವರಿಗಾಗಿ ತಮ್ಮ ಬಾಗಿಲುಗಳನ್ನು ತೆರೆದಿಟ್ಟಿದ್ದೇನೆ ಎಂದು ಆರ್‌ಜೆಡಿ ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಹೇಳಿಕೆ ಬಳಿಕ ಊಹಾಪೋಹ ಮತ್ತಷ್ಟು ಹೆಚ್ಚಿದ್ದವು.