ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ದೇಶಕ್ಕೆ ಮರಳಿ ಕರೆತರುವುದಾಗಿ ಶಪಥ ಮಾಡಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಬೆಂಬಲ ಪಡೆಯುವ ಇಂಗಿತವನ್ನು ಮಂಗಳವಾರ ವ್ಯಕ್ತಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸೀಫ್ ನಜರುಲ್,'ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ಭಾರತ ನಿರಾಕರಿಸಿದಲ್ಲಿ, ಅದು ಉಭಯ ದೇಶಗಳ ನಡುವಿನ ಹಸ್ತಾಂತರ ಕುರಿತ ಒಪ್ಪಂದದ ಉಲ್ಲಂಘನೆಯಾಗಲಿದೆ ಎಂದು ಹೇಳಿದರು' ಎಂಬುದಾಗಿ ಡೈಲಿ ಸ್ವಾರ್ ದೈನಿಕ ವರದಿ ಮಾಡಿದೆ.
'ಹಸೀನಾ ಅವರ ಹಸ್ತಾಂತರ ಕೋರಿ ಭಾರತಕ್ಕೆ ಪತ್ರ ಬರೆಯಲಾಗಿದೆ. ಒಂದು ವೇಳೆ ಅವರನ್ನು ಹಸ್ತಾಂತರಿಸದಿದ್ದಲ್ಲಿ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಲಾಗುವುದು' ಎಂದೂ ನಜರುಲ್ ಹೇಳಿದ್ದಾರೆ.