ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ 'ಪ್ಯಾರಿಸ್ ಒಪ್ಪಂದ'ದಿಂದ ಹೊರಬರುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹವಾಮಾನ ಬದಲಾವಣೆ ಕುರಿತ ಜಾಗತಿಕ ಪ್ರಯತ್ನದ ಭಾಗವಾದ ಈ ಒಪ್ಪಂದದಿಂದ ಕಳೆದ ಒಂದು ದಶಕದಲ್ಲಿ 2ನೇ ಬಾರಿ ಅಮೆರಿಕ ಹೊರಬಂದಂತಾಗಿದೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕ್ಯಾಪಿಟಲ್ ಒನ್ ಅರೇನಾದಲ್ಲಿ ಕಿಕ್ಕಿರಿದು ಸೇರಿದ್ದ ಅವರ ಬೆಂಬಲಿಗರ ಸಮ್ಮುಖದಲ್ಲಿ ಪ್ಯಾರಿಸ್ ಒಪ್ಪಂದದಿಂದ ಹೊರಬರುವ ನಿರ್ಣಯಕ್ಕೆ ಟ್ರಂಪ್ ಸಹಿ ಹಾಕಿದರು. 'ಅನ್ಯಾಯ ಹಾಗೂ ಏಕಪಕ್ಷೀಯವಾದ ಪ್ಯಾರಿಸ್ ಒಪ್ಪಂದವನ್ನು ಹರಿದುಹಾಕುವೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಒಪ್ಪಂದಿಂದ ಅಮೆರಿಕ ಹೊರಬಂದಿದೆ' ಎಂದು ಘೋಷಿಸಿದರು.
'ಚೀನಾವು ಯಾರ ಭಯವೂ ಇಲ್ಲದಂತೆ ಪರಿಸರವನ್ನು ನಾಶಪಡಿಸುತ್ತಿದೆ. ಆದರೆ ಅಮೆರಿಕವು ತನ್ನ ಕೈಗಾರಿಕೆಗಳನ್ನು ಸುಸ್ಥಿತಿಯಲ್ಲಿಟ್ಟಿದೆ' ಎಂದಿದ್ದಾರೆ.
ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ದಾಟದಂತೆ ನಿಗಾ ವಹಿಸುವ ನಿಟ್ಟಿನಲ್ಲಿ 2015ರಲ್ಲಿ ಸಹಿ ಹಾಕಲಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ, ಇರಾನ್, ಲಿಬಿಯಾ ಮತ್ತು ಯೆಮನ್ ರಾಷ್ಟ್ರಗಳು ಹೊರಗುಳಿದಂತಾಗಿದೆ.
ಈ ಒಪ್ಪಂದವೇ ಒಂದು 'ಮೋಸ' ಎಂದು ಕರೆದಿರುವ ಟ್ರಂಪ್, ಜಾಗತಿಕ ತಾಪಮಾನ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಅಮೆರಿಕದ ತೈಲ ಹಾಗೂ ಅನಿಲ ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸುವ ವಿಶಾಲ ಆಲೋಚನೆಯನ್ನು ಅವರು ಹೊಂದಿದ್ದಾರೆ ಎಂದೆನ್ನಲಾಗಿದೆ.
ಚೀನಾ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೌ ಜಿಯಾಕುನ್, 'ಪ್ಯಾರಿಸ್ ಒಪ್ಪಂದವನ್ನು ಯಾರೊಬ್ಬರೂ ಏಕಾಂಗಿಯನ್ನಾಗಿ ಮಾಡುವುದಿಲ್ಲ. ಹವಾಮಾನ ಬದಲಾವಣೆ ಕುರಿತು ಚೀನಾ ಸದಾ ಕಾಳಜಿ ಹೊಂದಿದೆ. ಕಡಿಮೆ ಇಂಗಾಲ ಹೊರಸೂಸುವಿಕೆ ಹಾಗೂ ಜಾಗತಿಕ ಹಸಿರು ನಿರ್ಮಾಣಕ್ಕೆ ಸದಾ ಕೈಜೋಡಿಸಿದೆ. ಸವಾಲುಗಳಿಗೆ ಸದಾ ಪ್ರತಿಕ್ರಿಯಿಸಿದೆ' ಎಂದಿದ್ದಾರೆ.
ಅಮೆರಿಕದ ನಿರ್ಧಾರದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಟೊನಿಯೊ ಗುಟೆರೆಸ್, 'ಕಡಿಮೆ ಇಂಗಾಲ ಹೊರಸೂಸುವಿಕೆ, ಉದ್ಯೋಗ ಸೃಷ್ಟಿ ಮೂಲಕ ಆರ್ಥಿಕ ಬೆಳವಣಿಗೆ ಕುರಿತು ದೂರದೃಷ್ಟಿ ಹಾಗೂ ನಾಯಕತ್ವ ವಹಿಸಲಾಗುವುದು. ಪ್ಯಾರಿಸ್ ಒಪ್ಪಂದ ಕುರಿತು ಸಂಘಟಿತ ಪ್ರಯತ್ನದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಈ ವಿಷಯದಲ್ಲಿ ನಾವು ಜತೆಗೂಡಿ ತ್ವರಿತವಾಗಿ ಹಾಗೂ ಸುದೀರ್ಘ ಹೆಜ್ಜೆ ಹಾಕಬೇಕಿದೆ' ಎಂದಿದ್ದಾರೆ.