ಭುವನೇಶ್ವರ: ಒಡಿಶಾದ ನಯಾಗಢ್ ಜಿಲ್ಲೆಯ ಕಾಡಿನಲ್ಲಿ ಮರಿಯೊಂದಿಗೆ ಅಪರೂಪದ ಕಪ್ಪು ಚಿರತೆ(melanistic leopard) ಪತ್ತೆಯಾಗಿದ್ದು, ವನ್ಯಜೀವಿ ಪ್ರಿಯರಲ್ಲಿ ಹರ್ಷ ತಂದಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಾಡಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರ್ಯಾಪ್ ಸಹಾಯದಿಂದ ಚಿರತೆಯ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ಮಧ್ಯ ಒಡಿಶಾದಲ್ಲಿ ಮರಿಯ ಜೊತೆಗೆ ಅಪರೂಪದ ಕಪ್ಪು ಚಿರತೆ ಕಂಡುಬಂದಿದೆ. ಇದು ಈ ಪ್ರದೇಶದಲ್ಲಿನ ಜೀವವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಕಪ್ಪು ಚಿರತೆಗಳು ಪರಿಸರ ವ್ಯವಸ್ಥೆಗೆ ಪ್ರಮುಖವಾಗಿವೆ. ಅವುಗಳ ಆವಾಸಸ್ಥಾನವನ್ನು ರಕ್ಷಿಸುವುದು ವನ್ಯಜೀವಿ ಪರಂಪರೆಯನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪ್ರೇಮ್ ಕುಮಾರ್ ಝಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ಪೋಸ್ಟ್‌ನಲ್ಲಿ ಚಿರತೆಯ ವಿಡಿಯೊ ಮತ್ತು ಚಿತ್ರಗಳನ್ನೂ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.