ಲಾಹೋರ್: 'ಪಂಜಾಬಿ ಅಧಿಕಾರಿಗಳ ಹತ್ಯೆ ಕಾನೂನುಬದ್ಧ' ಎಂದು ಪೋಸ್ಟ್ ಮಾಡಿದ್ದ ಪತ್ರಕರ್ತನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಬಂಧಿಸಿದ್ದಾರೆ.
'ಡೈಲಿ ಖಬ್ರಿಯನ್'ನ ಸಂಪಾದಕೀಯದ ಮಾಜಿ ಉಸ್ತುವಾರಿ ಹಾಗೂ ಲೇಖಕ ರಝೀಶ್ ಲಿಯಾಕತ್‌ಪುರಿ ಬಂಧಿತರು.
ಎಲೆಕ್ಟ್ರಾನಿಕ್ ಅಪರಾಧ ತಡೆ ಕಾಯ್ದೆಯ (ಪಿಇಸಿಎ) ವಿವಿಧ ಸೆಕ್ಷನ್‌ಗಳಡಿ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
'ಪಂಜಾಬಿ ಅಧಿಕಾರಿಗಳ ಹತ್ಯೆಯನ್ನು ಕಾನೂನುಬದ್ಧಗೊಳಿಸುವ ಮತ್ತು ಪಂಜಾಬ್‌ನ ಆಡಳಿತದಿಂದ ಸೆರೈಕಿಸ್ತಾನ್ ಪ್ರಾಂತ್ಯವನ್ನು ಮುಕ್ತವಾಗಿಸುವ ಸಂದೇಶವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ, ಪತ್ರಕರ್ತ ಹಾಗೂ ಲೇಖಕ ರಝೀಶ್ ಲಿಯಾಕತ್‌ಪುರಿ ಅವರನ್ನು ಭಯೋತ್ಪಾದನೆ ಮತ್ತು ಇತರ ಆರೋಪಗಳಡಿ ಬಂಧಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
'ಮೂರು ದಿನದ ಹಿಂದೆಯೇ ರಝೀಶ್ ಅವರನ್ನು ಬಂಧಿಸಿದ್ದ ಪೊಲೀಸರು, ಅಪರಿಚಿತ ಸ್ಥಳದಲ್ಲಿ ಅಕ್ರಮವಾಗಿರಿಸಿದ್ದರು. ಭಾನುವಾರದವರೆಗೂ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಸೆರೈಕಿ ಭಾಷೆಗಾಗಿ ಧ್ವನಿ ಎತ್ತಿದ್ದಕ್ಕಾಗಿ ಅವರು ಬಲಿಯಾಗಿದ್ದಾರೆ' ಎಂದು ಲಿಯಾಕತ್‌ಪುರಿ ಕುಟುಂಬದವರು ಹಾಗೂ ಪತ್ರಕರ್ತರು ಆರೋಪಿಸಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.