ಕಾಸರಗೋಡು : ಬಹುಭಾಷಾ ಸಾಹಿತಿ, ದ್ರಾವಿಡ ಭಾಷಾ ಸಂಘಟನೆಯ ಅಧ್ಯಕ್ಷೆ, ಡಾ. ಸುಷ್ಮಾ ಶಂಕರ್ ಅವರಿಗೆ ಕಾಸರಗೋಡು ಕನ್ನಡ ಭವನದ ಅಂತಾರಾಜ್ಯ ಪ್ರಶಸ್ತಿಯಾದ 'ಕನ್ನಡ ಪಯಸ್ವಿನಿ ಪ್ರಶಸ್ತಿ'ಪ್ರದಾನ ಮಾಡಲಾಯಿತು. ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಭವನದ ಸ್ಥಾಪಕ ಹಾಗೂ ನಿರ್ದೇಶಕ ಡಾ. ಕೆ. ವಾಮನ ರಾವ್ ಬೇಕಲ್, ಸಂಚಾಲಕಿ ಸಂಧ್ಯಾರಾಣಿ ಟೀಚರ್ ಪ್ರಶಸ್ತಿ ಪ್ರದಾನ ಮಾಡಿದರು.
ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ, ಕವಿ, ಪತ್ರಕರ್ತ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪೆÇ್ರ. ಪಿ. ಎನ್. ಮೂಡಿತ್ತಾಯ, ಡಾ. ಕೆ. ಕಮಲಾಕ್ಷ, ಪೆÇ್ರ. ಎ. ಶ್ರೀನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಡಕ್ಕೇರಿ ಗೋವಿಂದನ್ ನಾಯರ್ ಅವರ ಕಥನ ಖಂಡಕಾವ್ಯವನ್ನು ಡಾ. ಸುಷ್ಮಾ ಶಂಕರ್ 'ಭೂತದ ಹಾಡು'ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಗೊಳಿಸಿದ್ದು, ಈ ಕೃತಿಯನ್ನು ಹಿರಿಯ ಅನುವಾದಕ, ಕೇರಳ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದ ಕೆ.ವಿ. ಕುಮಾರನ್ ಬಿಡುಗಡೆಗೊಳಿಸಿದರು. ಮಲಯಾಳದ ಪ್ರಸಿದ್ಧ ಕಾವ್ಯಕೃತಿಯಾಗಿರುವ 'ಭೂತದ ಹಾಡು'ನೂರಾರು ವರ್ಷಗಳಿಂದ ಒಂದು ನಾಡಿನ ಸಾಂಸ್ಕೃತಿಕ ಸಾಂಪ್ರದಾಯಿಕ ಆಚರಣೆಯಾಗಿದೆ. ಕನ್ನಡದ ಪುಣ್ಯಕೋಟಿ ಎಂಬ ಗೋವಿನ ಹಾಡಿನಂತೆ ಜನಪ್ರಿಯವಾದ ಈ ಹಾಡು ಮಾತೃತ್ವದ ಮಹತ್ವವನ್ನು, ಮಾನವೀಯ ಮೌಲ್ಯಗಳನ್ನು ಸಾರಿ ಹೇಳುತ್ತದೆ. ಕನ್ನಡ ಭಾಷೆಯ ಮೇಲೆ ಅಪಾರ ಗೌರವ ಹೊಂದಿರುವ ಸುಷ್ಮಾ ಅವರು ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ಕನ್ನಡ ಕಲಿತು ಸಾಹಿತ್ಯ ಸೃಷ್ಟಿ ಮತ್ತು ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡವರು. ಕಳೆದ ಮೂರು ದಶಕಗಳಿಂದ ಶಿಕ್ಷಕಿಯಾಗಿರುವ ಅವರು ಮಕ್ಕಳ ಸಾಹಿತ್ಯ, ಮಾಸಪತ್ರಿಕೆಯನ್ನು ಹೊರತರುತ್ತಿದ್ದಾರೆ. ಕನ್ನಡದಿಂದ ಮಲೆಯಾಳಕ್ಕೆ ಹಲವು ಕೃತಿಗಳನ್ನು ಅನುವಾದಗೊಳಿಸಿದ್ದಾರೆ. ತಮಿಳು, ತೆಲುಗು ಭಾಷೆಗಳಿಂದಲೂ ಕನ್ನಡಕ್ಕೆ ಅನುವಾದಗೊಳಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿ.ಹೆಚ್.ಡಿ. ಪಡೆದಿದ್ದಾರೆ.
ಕೃತಿ ಬಿಡುಗಡೆಗೊಳಿಸಿದ ಕೆ.ವಿ. ಕುಮಾರನ್ ಅವರು ಭಾಷಾಂತರದ ಮೀಮಾಂಸೆಯನ್ನು ಹೇಳಿ, ಅನುವಾದ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆಯನ್ನು ಸ್ಮರಿಸಿ ಡಾ. ಸುಷ್ಮಾ ಅವರ ಸಾಧನೆಯನ್ನು ಶ್ಲಾಘಿಸಿದರು. ಕವಿ ರವೀಂದ್ರನ್ ಪಾಡಿ ಉಪಸ್ಥಿತರಿದ್ದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.