ಇಂಫಾಲ: ಪ್ರತಿಯೊಂದು ತಪ್ಪುಗ್ರಹಿಕೆಯನ್ನೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು, ರಾಜ್ಯದಲ್ಲಿ ಮಾನ್ಯತೆ ಪಡೆದಿರುವ ಎಲ್ಲ ಪಂಗಡಗಳು ಒಟ್ಟಾಗಿ ಬಾಳ್ವೆ ನಡೆಸಬೇಕು ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಮಣಿಪುರಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಮಾನ್ಯತೆ ದೊರೆತ 53ನೆಯ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, 'ಅನಗತ್ಯ ವಿಷಯಗಳ ಬಗ್ಗೆ ಮಾತನಾಡುವುದನ್ನು, ಅಂಥವುಗಳಲ್ಲಿ ತೊಡಗುವುದನ್ನು ನಿಲ್ಲಿಸೋಣ' ಎಂದು ಕರೆ ನೀಡಿದ್ದಾರೆ.
'ಅಕ್ರಮವಾಗಿ ವಲಸೆ ಬಂದವರನ್ನು ಸರಿಯಾಗಿ ಗುರುತಿಸಿ ಅವರನ್ನು ಹೊರಹಾಕಬೇಕು ಎಂದು ನಾವು (ರಾಜ್ಯ ಸರ್ಕಾರ) ಹೇಳಿದ್ದೆವು. ರಾಜ್ಯದಲ್ಲಿ ಹಿಂದಿನಿಂದಲೂ ಇರುವವರ ವಿರುದ್ಧವಾಗಿ ನಾವು ಯಾವತ್ತೂ ಏನನ್ನೂ ಹೇಳಿಲ್ಲ. ಮಾನ್ಯತೆ ಪಡೆದ ಎಲ್ಲ ಪಂಗಡಗಳು ಒಟ್ಟಾಗಿ ಬಾಳ್ವೆ ನಡೆಸಬೇಕಿದೆ' ಎಂದು ಅವರು ಹೇಳಿದ್ದಾರೆ.
ಎಲ್ಲ ಸಮುದಾಯಗಳೂ ಶಾಂತಿ ಸ್ಥಾಪಿಸಲು ಯತ್ನಿಸಬೇಕು ಎಂದು ಕೂಡ ಅವರು ಕರೆ ನೀಡಿದ್ದಾರೆ. 2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ 250ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಹಸ್ರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ ಎನ್ನುವುದನ್ನೂ ನೆನಪಿಸಿಕೊಂಡಿದ್ದಾರೆ.