ಕುಂಬಳೆ: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಸನಿಹದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಸೇವಾ ರೂಪದಲ್ಲಿ ಸಮರ್ಪಣೆಯಾದ ಶಿಲಾ ದೀಪಸ್ತಂಭದ ಲೋಕಾರ್ಪಣೆ ಕಾರ್ಯಕ್ರಮ ದೇವಸ್ಥಾನದಲ್ಲಿ ಜರುಗಿತು. ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಲೋಕಾರ್ಪಣೆಗೊಳಿಸಿ ಆಶೀರ್ವಚನಗೈದರು.
ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕ್ಷೇತ್ರಕ್ಕೆ ದೀಪವನ್ನು ಸಮರ್ಪಿಸಿದ ಪುತ್ತಿಗೆ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀರಾಮ ಅಡಿಗಳು ಮತ್ತು ಶಿಲ್ಪಿ ತ್ಯಾಗರಾಜ ಆಚಾರ್ಯ ಬೆದ್ರಂಪಳ್ಳ ಅವರನ್ನು ಸನ್ಮಾನಿಸಲಾಯಿತು. ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್, ಉದ್ಯಮಿ ನವೀನ್ ಶೆಟ್ಟಿ ಮಂಗಳೂರು, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡ.ಸುಬ್ಬಣ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಡಿ.ರಾಜೇಂದ್ರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.