ಅಮರಾವತಿ: ಕುಟುಂಬ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗಳು, ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಉದ್ಯೋಗಕ್ಕಾಗಿ ಲಭ್ಯವಿರುವ ಜನರ ಸಂಖ್ಯೆಯಲ್ಲಿ ಕುಸಿತದಿಂದ ಉದ್ಭವಿಸಿರುವ ಸಮಸ್ಯೆ ನಿವಾರಣೆಗೆ ಆಂಧ್ರಪ್ರದೇಶ ಸರ್ಕಾರ 'ಜನಸಂಖ್ಯೆ ನಿರ್ವಹಣೆ' ನೀತಿ ರೂಪಿಸಲು ಮುಂದಾಗಿದೆ.
ಗಣರಾಜ್ಯೋತ್ಸವ ಅಂಗವಾಗಿ ವಿಜಯವಾಡದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಈ ಕುರಿತು ಹೇಳಿದ್ದಾರೆ.
'ರಾಜ್ಯದಲ್ಲಿ ಒಟ್ಟಾರೆ ಫಲವಂತಿಕೆ ದರ (ಟಿಎಫ್‌ಆರ್)ದಲ್ಲಿ ಭಾರಿ ಕುಸಿತವಾಗಿದ್ದು, ಜನಸಂಖ್ಯೆಯಲ್ಲಿ ಸ್ಥಿತ್ಯಂತರ ಕಂಡುಬರುತ್ತಿದೆ. ಇನ್ನೊಂದೆಡೆ, ವಯಸ್ಸಾದವರ ಸಂಖ್ಯೆಯಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದರೆ, ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಈ ಎಲ್ಲ ವಿದ್ಯಮಾನಗಳು ದೂರಗಾಮಿ ಪರಿಣಾಮ ಹೊಂದಿವೆ' ಎಂದು ಅವರು ವಿಶ್ಲೇಷಿಸಿದ್ದಾರೆ.
'ಸರ್ಕಾರ ಇಂತಹ ಬಹುವಿಧದ ಪರಿಣಾಮಗಳನ್ನು ನಿರ್ವಹಿಸಲು ಬದ್ಧವಾಗಿದೆ. ಈ ಸಂಬಂಧ 'ಜನಸಂಖ್ಯೆ ನಿರ್ವಹಣೆ' ನೀತಿಯನ್ನು ಜಾರಿಗೊಳಿಸಲಿದೆ' ಎಂದು ಹೇಳಿದ್ದಾರೆ.
'ಜನಸಂಖ್ಯೆ ನಿರ್ವಹಣೆ' ನೀತಿಯು, ರಾಜ್ಯದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆಯನ್ನು ಹೆಚ್ಚಿಸುವುದು, ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ಭದ್ರತೆ ಯೋಜನೆಗಳ ಜಾರಿ ಹಾಗೂ ಸಮುದಾಯ ಆಧಾರಿತ ನೆರವು ಒದಗಿಸುವ ವ್ಯವಸ್ಥೆಗಳ ಅನುಷ್ಠಾನದಂತಹ ಅಂಶಗಳನ್ನು ಒಳಗೊಂಡಿದೆ' ಎಂದು ವಿವರಿಸಿದ್ದಾರೆ.
'ಹಿಂದಿನ ಸರ್ಕಾರವು ಹಣಕಾಸನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ, ಏಳು ತಿಂಗಳ ಹಿಂದೆಯಷ್ಟೆ ಅಸ್ತಿತ್ವಕ್ಕೆ ಬಂದ ನೂತನ ಸರ್ಕಾರವು ತೀವ್ರ ಆರ್ಥಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟನ್ನು ಎದುರಿಸುವಂತಾಗಿದೆ' ಎಂದಿದ್ದಾರೆ.
'ವಿಪರೀತ ಹಾಗೂ ಅಧಿಕ ಬಡ್ಡಿದರದ ಸಾಲಗಳಿಂದಾಗಿ ರಾಜ್ಯದ ಆರ್ಥಿಕತೆ ಸಂಕಷ್ಟದಲ್ಲಿತ್ತು. ಆಡಳಿತ ಹಳಿ ತಪ್ಪಿತ್ತು ಹಾಗೂ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿದ್ದವು' ಎಂದೂ ಹೇಳಿದ್ದಾರೆ.