ಸುಕ್ಮಾ/ರಾಯ್‌ಪುರ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ಇಂದು (ಗುರುವಾರ) ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ.
ಈ ಕುರಿತು ಛತ್ತೀಸಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಮಾಹಿತಿ ನೀಡಿದ್ದು, ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಯಶಸ್ಸನ್ನು ಸಾಧಿಸಿವೆ ಎಂದು ಹೇಳಿದ್ದಾರೆ.
ಈವರೆಗೆ ಮೂವರು ನಕ್ಸಲರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ರಾಯ್‌ಪುರದಲ್ಲಿ ತಿಳಿಸಿದ್ದಾರೆ.
ಜನವರಿ 6ರಂದು ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರ ಐಇಡಿ ದಾಳಿಯಲ್ಲಿ ಎಂಟು ಪೂಲೀಸರು ಹಾಗೂ ಕಾರಿನ ಚಾಲಕ ಹುತಾತ್ಮರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, 'ಭದ್ರತಾ ಸಿಬ್ಬಂದಿಯನ್ನು ನಾನು ಭೇಟಿಯಾಗಿದ್ದೇನೆ. ನಮ್ಮ ಜವಾನರಿಗೆ ಧೈರ್ಯ ತುಂಬಿದ್ದೇನೆ. ನಕ್ಸಲರ ಈ ಕೃತ್ಯದ ವಿರುದ್ಧ ಯೋಧರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಿಗದಿತ ಅವಧಿಯೊಳಗೆ ನಕ್ಸಲರನ್ನು ನಿಗ್ರಹ ಮಾಡಲಾಗುವುದು' ಎಂದು ಅವರು ಹೇಳಿದ್ದಾರೆ.
ಸುಕ್ಮಾ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ನಡೆದಿದೆ. ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಇದರೊಂದಿಗೆ ಈ ವರ್ಷ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಂಬತ್ತು ಮಂದಿ ನಕ್ಸಲರನ್ನು ನಿಗ್ರಹಿಸಲಾಗಿದೆ.
ಜನವರಿ 6ರಂದು ನಾರಾಯಣಪುರ, ದಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ನಕ್ಸರನ್ನು ಹತ್ಯೆಗೈಯಲಾಗಿತ್ತು. ಜನವರಿ 3ರಂದು ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್ ಹತನಾಗಿದ್ದನು.
ಕಳೆದ ವರ್ಷ (2024) ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ, 219 ನಕ್ಸಲರನ್ನು ಮಟ್ಟ ಹಾಕಿತ್ತು.