ಟೊರಾಂಟೊ: 'ಕೆನಡಾವನ್ನು ಅಮೆರಿಕದ ಜತೆಗೆ ವಿಲೀನಗೊಳಿಸಿ ರಾಷ್ಟ್ರದ 51ನೇ ರಾಜ್ಯವನ್ನಾಗಿಸುವುದಾಗಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೆಯು ತಮಾಷೆಯಿಂದ ಕೂಡಿಲ್ಲ. ಅದರಲ್ಲಿ ತನ್ನ ಮಿತ್ರರಾಷ್ಟ್ರವನ್ನು ದುರ್ಬಲಗೊಳಿಸುವ ಉದ್ದೇಶವಿದೆ' ಎಂದು ಕೆನಡಾದ ಹಣಕಾಸು ಸಚಿವರು ಬುಧವಾರ ಹೇಳಿದ್ದಾರೆ.
ನವೆಂಬರ್ ಕೊನೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮಾರ್-ಎ-ಲಾಗೊದಲ್ಲಿ ನಡೆಸಿದ ಔತಣ ಕೂಟದಲ್ಲಿ ಟ್ರಂಪ್ ಮೊದಲ ಬಾರಿಗೆ ಇಂತಹ ಹೇಳಿಕೆ ನೀಡುವಾಗ ನಗುತ್ತಿದ್ದರು ಎಂದು ಅಮೆರಿಕ- ಕೆನಡಾ ಸಂಬಂಧಗಳನ್ನು ನಿರ್ವಹಿಸುವ ದೇಶದ ಪ್ರಮುಖ ವ್ಯಕ್ತಿ ಡೊಮಿನಿಕ್ ಲೆಬ್ಲಾಂಕ್ ಹೇಳಿದ್ದಾರೆ.
'ಜೋಕ್ ಮುಗಿದಿದೆ. ಜನರನ್ನು ಗೊಂದಲದಲ್ಲಿ ಬೀಳಿಸಲು ಮತ್ತು ಪ್ರಚೋದಿಸಲು ಹಾಗೂ ಅರಾಜಕತೆ ಸೃಷ್ಟಿಸಲು ಇದು ಆ ವ್ಯಕ್ತಿಗೆ ಒಂದು ಮಾರ್ಗವಾಗಿರಬಹುದು. ಆದರೆ, ಇಂಥದ್ದು ಎಂದಿಗೂ ಸಂಭಿಸದು' ಎಂದು ಕಟುವಾಗಿ ಹೇಳಿದ್ದಾರೆ.
ಕೆನಡಾದ ಎಲ್ಲ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಲೆಬ್ಲಾಂಕ್ ಅವರು, ಅಧಿಕ ಸುಂಕ ತಪ್ಪಿಸುವ ಮತ್ತು ಗಡಿ ಭದ್ರತೆಯನ್ನು ಹೆಚ್ಚಿಸುವ ಕುರಿತು ಮುಂಬರುವ ಟ್ರಂಪ್ ಆಡಳಿತದ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ.
'ಸಮಯವು ನಿಸ್ಸಂಶಯವಾಗಿ ಭೀಕರವಾಗಿದೆ. ಆದರೆ, ಕೆನಡಾ ದೃಢವಾಗಿ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಲು ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಟ್ರಂಪ್‌ಗೆ ಸ್ವಂತ ದೇಶದಲ್ಲಿ ತನ್ನದೇ ಆದ ಸಾಕಷ್ಟು ಸಮಸ್ಯೆಗಳಿವೆ. ಅವುಗಳತ್ತ ಅವರು ಗಮನ ಕೇಂದ್ರೀಕರಿಸಲಿ' ಎಂದು ಲಿಬರಲ್ ಪಕ್ಷದ ಸಂಸದ ಜುಡಿ ಸ್ಗ್ರೋ ಪ್ರತಿಕ್ರಿಯಿಸಿದ್ದಾರೆ.
ಕೆನಡಾವು ಅಮೆರಿಕದ 51ನೇ ರಾಜ್ಯವಾಗಿ ಸೇರ್ಪಡೆಯಾಗಬೇಕೆಂದು ಪ್ರತಿಪಾದಿಸಿರುವ ಟ್ರಂಪ್, 4 ಕೋಟಿಗಿಂತಲೂ ಹೆಚ್ಚು ಜನರಿಗೆ ನೆಲೆಯಾಗಿರುವ ಮತ್ತು ನ್ಯಾಟೊ ಸ್ಥಾಪಕ ಪಾಲುದಾರ ದೇಶದ ಮೇಲೆ ಆಕ್ರಮಣ ಮಾಡಲು ಮಿಲಿಟರಿ ಬಲವನ್ನು ಬಳಸುವುದಿಲ್ಲ ಎಂದೂ ಮಂಗಳವಾರ ಹೇಳಿದ್ದರು.