ಉಪ್ಪಳ: ಸಾಮಾಜಿಕ ಚಟುವಟಿಕೆ ಮೂಲಕ ಜಿಲ್ಲೆಗೆ ಮಾದರಿಯಾದ ಉಪ್ಪಳ ಬ್ರದರ್ಸ್ ಮಣಿಮುಂಡ ಸಂಘಟನೆಯ ಮೂವತ್ತನೇ ವಾರ್ಷಿಕೋತ್ಸವದಂಗವಾಗಿ ಮೂರು ದಿನಗಳ ಕಾಲ ನಡೆದ ಮಣಿಮುಂಡ ಫೆಸ್ಟ್ ಗುರುವಾರ ಸಮಾಪ್ತಿಗೊಂಡಿತು.
ಎಲ್ಲಾ ವರ್ಷಕ್ಕಿಂತಲೂ ಭಿನ್ನವಾಗಿ ಬಹಳ ಅದ್ದೂರಿಯಾಗಿ ನಡೆದ ಮಣಿಮುಂಡ ಫೆಸ್ಟ್ ಗ್ರಾಮದ ಜನರಲ್ಲಿ ಉತ್ಸವವಾಗಿ ಮಾರ್ಪಾಟಾಗಿತ್ತು. ಮೂರು ದಿನ ಮಣಿಮುಂಡ ಶಾಲಾ ಮೈದಾನದಲ್ಲಿ ನಡೆದ ಕ್ರಿಡೋತ್ಸವ ಗ್ರಾಮದೊಳಗೆ ಒಂದು ಒಲಿಂಪಿಕ್ಸ್ ಮಾದರಿಯ ಉತ್ಸಾಹವನ್ನು ಮೂಡಿಸಿತು.
ಗುರುವಾರದಂದು ಮಣಿಮುಂಡ ಶಾಲಾ ಸಭಾಂಗಣದಲ್ಲಿ ಸಂಘಟನೆಯ ಅಧ್ಯಕ್ಷ ಅಝೀಂ ಮಣಿಮುಂಡ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಮಂಜೇಶ್ವರ ಶಾಸಕ ಎ.ಕೆ. ಎಂ.ಅಶ್ರಫ್ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮ್ಮದಲಿ ಕೆ, ಅಬು ರೋಯಲ್ ಬೊಳ್ಳಾಲ್, ಕರೀಂ ಕಯ್ಯಾರ್, ವಾರ್ಡ್ ಸದಸ್ಯ ಮೆಹಮೂದ್ ಉಪಸ್ಥಿತರಿದ್ದರು.
ಈ ಸಂದರ್ಭ ಮಣಿಮುಂಡ ಬ್ರದರ್ಸ್ ಕೊಡಮಾಡುವ ಮೂಸಾ ಹಾಜಿ ಸ್ಮರಣಾರ್ಥ ಸಮಾಜ ಸಬಲೀಕರಣಕ್ಕಾಗಿ ನೀಡಲಾಗುತ್ತಿರುವ ಪ್ರಶಸ್ತಿಯನ್ನು ಕೆ ಎಂ ಅಬೂಬಕ್ಕರ್ ರವರಿಗೂ, ಸೈಯದ್ ಯೂಸುಫ್ ಹಾಜಿ ಸ್ಮಾರಕ ಸಮುದಾಯ ಅಭಿವೃದ್ಧಿಗೆ ನೀಡಲಾಗುತ್ತಿರುವ ಪ್ರಶಸ್ತಿಯನ್ನು ಎಂ.ಕೆ. ಅಲಿ ಮಾಸ್ಟರ್ ಅವರಿಗೂ, ಸಮಾಜ ಸೇವೆಗಾಗಿ ನೀಡಲಾಗುತ್ತಿರುವ ಜುಲ್ಫಿಕರ್ ಉಂಬೈಚಾ ಪ್ರಶಸ್ತಿಯನ್ನು ಅಬ್ದುಲ್ ರಶೀದ್ ಉಸ್ಮಾನ್ ರವರಿಗೂ ಶಾಸಕ ಎ ಕೆ ಎಂ ಅಶ್ರಫ್ ಪ್ರಧಾನ ಗೈದರು.
ಬಳಿಕ ಮಣಿಮುಂಡ ಗ್ರಾಮದ ಅಭಿವೃದ್ಧಿ ರೂವಾರಿಗಳಾದ 12 ಮಂದಿಯನ್ನು ಸನ್ಮಾನಿಸುವ ಜೊತೆಯಾಗಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಾಧಕರು ಹಾಗೂ ಪದವೀಧರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೊಹಮ್ಮದ್ ಮುಶಾಬ್, ಉಸ್ಮಾನ್ ದಾವೂದ್, ಶಬೀರ್, ಉಬೈದುಲ್ಲ, ಅಬ್ದುಲ್ ಲತೀಫ್, ಮೊಹಮ್ಮದ್ ಅಫ್ರೀದ್, ಮೊಹಮ್ಮದ್ ಅಫ್ಸಲ್ ಹಾಗೂ ಅಬ್ದುಲ್ ಜಲೀಲ್ ಮೊದಲಾದವರು ನೇತೃತ್ವ ನೀಡಿದರು.