ಕಾಸರಗೋಡು: ಸತ್ಯಸಂಧತೆ ಮತ್ತು ಪ್ರಾಮಾಣಿಕತೆ ಕಾಪಾಡಿಕೊಳ್ಳುವ ಮೂಲಕ ಒಬ್ಬ ಉತ್ತಮ ಪತ್ರಕರ್ತನಾಗಿ ಬೆಳೆಯಲು ಸಾಧ್ಯ ಎಂದು ಸಚಿವ ರಾಮಚಂದ್ರ ಕಡನ್ನಪಲ್ಲಿ ತಿಳಿಸಿದರು. ಅವರು ಕಾಸರಗೋಡು ಪ್ರೆಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಕೆ.ಎಂ.ಅಹ್ಮದ್ ಸಂಸ್ಮರಣೆ ಮತ್ತು ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಇಂದು ಹಲವಾರು ಸವಾಲುಗಳ ಮಧ್ಯೆ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆಯಿದೆ. ಆಧುನಿಕ ಪತ್ರಿಕೋದ್ಯಮದಲ್ಲಿ ಮಾಧ್ಯಮದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆಯಿದೆ. ಪತ್ರಕರ್ತರು ಆತ್ಮಸ್ಥೈರ್ಯದಿಂದ ಕಾರ್ಯಾಚರಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮಲಯಾಳಂ ಮನೋರಮಾ ಛಾಯಾಗ್ರಾಹಕ ಜಿತಿನ್ ಜೋಯಲ್ ಹರಿಮ್ ಅವರಿಗೆ ಪ್ರಶಸ್ತಿ ಫಲಕ, ನಗದು ಪುರಸ್ಕಾರ ಒಳಗೊಂಡ ಛಾಯಾಚಿತ್ರ ಮಾಧ್ಯಮ ಪ್ರಶಸ್ತಿಯನ್ನು ಸಚಿವರು ವಿತರಿಸಿದರು.
ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್ ಎ ನೆಲ್ಲಿಕುನ್ನು ಅವರು ಕೆ.ಎಂ ಅಹಮ್ಮದ್ ಸ್ಮರಣಾರ್ಥ ಉಪನ್ಯಾಸ ನೀಡಿದರು. ಟಿ.ಎ ಶಫಿ, ವಿವಿ ಪ್ರಭಾಕರನ್, ನಹಾಸ್ ಪಿ. ಮುಹಮ್ಮದ್, ರವೀಂದ್ರನ್ ರಾವಣೇಶ್ವರಂ, ಸುರೇಂದ್ರನ್ ಮಡಿಕೈ ಉಪಸ್ಥಿತರಿದ್ದರು. ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಸ್ವಾಗತಿಸಿ ಕಾರ್ಯಖ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ಪುರುಷೋತ್ತಮ ಪೆರ್ಲ ವಂದಿಸಿದರು.