ನವದೆಹಲಿ: ಟೆಕಿ ಅತುಲ್ ಸುಭಾಷ್ ಸಾವಿನ ಬೆನ್ನಲ್ಲೇ ವಾಯವ್ಯ ದೆಹಲಿ ಕಲ್ಯಾಣ್ ವಿಹಾರ್ ಪ್ರದೇಶದದಲ್ಲಿ ಉದ್ಯಮಿಯೊಬ್ಬರು ನೇಣಿಗೆ ಶರಣಾಗಿದ್ದು, ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.
ವುಡ್‌ಬಾಕ್ಸ್ ಕೆಫೆ ಸಹ ಮಾಲೀಕ ಪುನೀತ್ ಖುರಾನ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ. ವ್ಯವಹಾರದ ವಿಚಾರವಾಗಿ ಖುರಾನ ಮತ್ತು ಪತ್ನಿಯ ನಡುವೆ ವೈಮನಸ್ಸು ಮೂಡಿದ್ದು, ವಿಚ್ಛೇದನದವರೆಗೂ ಹೋಗಿತ್ತು ಎನ್ನಲಾಗಿದೆ.
'ಮೃತನ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ತನಿಖೆ ನಡೆಯುತ್ತಿದೆ' ಎಂದು ಉಪ ಪೊಲೀಸ್ ಆಯುಕ್ತ ಭಿಷಮ್ ಸಿಂಗ್ ಹೇಳಿದ್ದಾರೆ.
'ನನ್ನ ಮಗನ ಸಾವಿಗೆ ಆತನ ಪತ್ನಿ ಮತ್ತು ಆಕೆಯ ಸಂಬಂಧಿಕರೇ ಕಾರಣ. ಹಣ ಮತ್ತು ಆಸ್ತಿ ವಿಚಾರವಾಗಿ ಅವರು ನನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಪುನೀತ್ ಖುರಾನ ತಂದೆ ತ್ರಿಲೋಕ್ ಕುಮಾರ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
2016ರ ಡಿಸೆಂಬರ್‌ನಲ್ಲಿ ನನ್ನ ಸಹೋದರನಿಗೆ ವಿವಾಹವಾಗಿತ್ತು. ಕೌಟುಂಬಿಕ ವಿವಾದಗಳಿಂದ ಕಳೆದ ಎರಡು ವರ್ಷದಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ನನ್ನ ಸಹೋದರನಿಗೆ ಮಾಸಿಕ ಹಿಂಸೆ ಮತ್ತು ಕಿರುಕುಳ ನೀಡಿ ಅವನ ಸಾವಿಗೆ ಕಾರಣವಾದ ಆರೋಪಿಗಳನ್ನು ಕಂಬಿ ಹಿಂದೆ ನಿಲ್ಲಿಸಬೇಕು. ಆ ಮೂಲಕ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು' ಎಂದು ಖುರಾನ ಸಹೋದರಿ ಆಗ್ರಹಿಸಿದ್ದಾರೆ.
ಡಿಸೆಂಬರ್ 31ರಂದು ಪುನೀತ್ ಖುರಾನ ಆತ್ಮಹತ್ಯೆಗೆ ಶರಣಾಗಿದ್ದರು.