ಕುಂಬಳೆ: ಕ್ರಿಯಾಶಕ್ತಿ, ಧೀಶಕ್ತಿಗಳ ಮೂಲಕ ಬದ್ಧತೆ ಉಳಿಸಿಕೊಂಡಿದ್ದ ಕಳ್ಳಿಗೆ ಮಹಾಬಲ ಭಂಡಾರಿ ಅವರು ಸಂಕಲ್ಪ ಶಕ್ತಿಯಿಂದ ಔನತ್ಯಕ್ಕೇರಿದವರು ಎಂದು ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಗ್ರಂಥಾಲಯ ವತಿಯಿಂದ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ನಡೆದ ಕನ್ನಡ ಹೋರಾಟಗಾರ ಕಳ್ಳಿಗೆ ಮಹಾಬಲ ಭಂಡಾರಿ ಸ್ಮೃತಿ ಕಾರ್ಯಕ್ರಮದಲ್ಲಿ ಸಂಸ್ಮರಣೆ ಭಾಷಣ ಮಾಡಿದರು.
ನಿರಂಜನರ ಜೊತೆ ನೀಲೇಶ್ವರದಲ್ಲಿ ಪ್ರೌಢಶಾಲಾ ದಿನಗಳಲ್ಲಿ ಸಾಹಿತ್ಯದತ್ತ ಒಲವು ಮೂಡಿಸಿಕೊಂಡ ಕಳ್ಳಿಗೆ ಅವರಿಗೆ ಹೋರಾಟವೇ ಬದುಕಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ 14ನೇ ವಯಸ್ಸಿನಲ್ಲೇ ತೊಡಗಿಸಿಕೊಂಡವರು ಎಂದರು.
ಚಿಂತಕ ಸುಕುಮಾರ ಆಲಂಪಾಡಿ ಸಮಾರಂಭವನ್ನು ಉದ್ಘಾಟಿಸಿದರು. ಕಳ್ಳಿಗೆ ಅವರದು ಕಾಲಾತೀತ ಬದುಕು. 46 ವರ್ಷಗಳ ನಂತರವೂ ಅವರನ್ನು ನಾವು ಸ್ಮರಿಸುತ್ತೇವೆ ಎಂಬುದು ಅವರ ಸಾಧನೆಯ ಆಳವನ್ನು ತಿಳಿಸುತ್ತದೆ. ತಾವು ಸಕ್ರಿಯರಾದ ಎಲ್ಲ ವಲಯಗಳಲ್ಲೂ ಪರಿಪೂರ್ಣರಾಗಿದ್ದ ಅವರು ಕನ್ನಡ ಹಿತಾಸಕ್ತಿ ಮಾತ್ರ ಹೊಂದಿದ್ದ ಕಾರಣ ರಾಜಕಾರಣ ಕ್ಷೇತ್ರದಲ್ಲೂ ಶುದ್ಧ ಹೃದಯಿಗಳಾಗಿದ್ದರು ಎಂದವರು ತಿಳಿಸಿದರು.
ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭವನ ಸಂಸ್ಥಾಪಕ ಡಾ.ವಾಮನರಾವ್ ಬೇಕಲ್ ಅವರಿಗೆ ಗೌರವಾರ್ಪಣೆ ನಡೆಯಿತು. ಗಮಕ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಉಪಸ್ಥಿತರ್ದಿರು. ಶೇಖರ್ ಶೆಟ್ಟಿ ಬಾಯಾರು ಸ್ವಾಗತಿಸಿ, ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.