ಠಾಣೆ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಇಲ್ಲಿನ ಭೀವಂಡಿಯಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂಬ್ಳಿ, ಬುಧವಾರ ಸಂಜೆ 4ರ ಸುಮಾರಿಗೆ ಆಸ್ಪತ್ರೆಯಿಂದ ತೆರಳಿದ್ದಾರೆ.
ಆಸ್ಪತ್ರೆಯಿಂದ ಹೊರನಡೆಯುವಾಗ ಅವರು ಟೀಂ ಇಂಡಿಯಾ ಜೆರ್ಸಿ ತೊಟ್ಟು, ಬ್ಯಾಟ್ ಹಿಡಿದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮೂತ್ರನಾಳದ ಸೋಂಕು ಮತ್ತು ಸ್ನಾಯು ಸೆಳೆತದಿಂದ ಬಳಲುತ್ತಿದ್ದ 52 ವರ್ಷದ ಕಾಂಬ್ಳಿ ಅವರನ್ನು ಡಿಸೆಂಬರ್ 21ರಂದು ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ನಂತರ ಕಂಡುಬಂದಿತ್ತು.
ಮನೆಗೆ ತೆರಳುವಾಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಬ್ಳಿ, ಹೊಸ ವರ್ಷದ ಸಂದೇಶ ಹಂಚಿಕೊಂಡಿದ್ದಾರೆ. 'ದುಶ್ಚಟಗಳು ಜೀವನವನ್ನು ನಾಶಮಾಡುತ್ತವೆ' ಎಂದಿರುವ ಅವರು, ಮದ್ಯ ಹಾಗೂ ಮಾದಕ ದ್ರವ್ಯಗಳಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ವಿವೇಕ್ ತ್ರಿವೇದಿ ಅವರು, 'ಕಾಂಬ್ಳಿ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.
ಕಾಂಬ್ಳಿ ಆಸ್ಪತ್ರೆಯಲ್ಲಿದ್ದಾಗ ನೃತ್ಯ ಮಾಡಿದ ವಿಡಿಯೊ ಎರಡು ದಿನಗಳ ಹಿಂದೆ ಸದ್ದು ಮಾಡಿತ್ತು.