ಪಾಲಕ್ಕಾಡ್: ನೆನ್ಮಾರ ಜೋಡಿ ಕೊಲೆ ಪ್ರಕರಣದ ಆರೋಪಿ ಚೆಂತಾಮರ ಪೋತುಂಡಿ ಮತ್ತೈನಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿಯ ಮೇರೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಗಿದೆ. ಮತ್ತೈ ದೇವಸ್ಥಾನದ ಬಳಿ ಇರುವ ಪೊದೆಗಳೆಡೆಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ನೋಡಿರುವುದಾಗಿ ಹೇಳಲಾಗಿದೆ.
ಪೋಲೀಸರು ಕೂಡ ಇದು ಚೆಂತಾಮರನೇ ಎಂದು ದೃಢಪಡಿಸಿದ್ದಾರೆ. ಪೋಲೀಸ್ ತಂಡದಲ್ಲಿದ್ದ ಒಬ್ಬರು ಕೂಡ ಆತನನ್ನು ನೋಡಿದ್ದಾರೆಂದು ವರದಿಯಾಗಿದೆ. ಪೋಲೀಸರೊಂದಿಗೆ ಅಧಿಕಾರಿಗಳು ಮತ್ತು ಸುಮಾರು ನೂರಕ್ಕಿಂತಲೂ ಮಿಕ್ಕಿದ ಸ್ಥಳೀಯರು ಶೋಧ ಕಾರ್ಯದಲ್ಲಿ ನಿನ್ನೆ ತಡರಾತ್ರಿ ವರೆಗೂ ಭಾಗವಹಿಸಿದರು. ಇದು ಅರಣ್ಯ ಪ್ರದೇಶ. ಆರೋಪಿ ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಚೆಂತಾಮರನನ್ನು ನೋಡಿದ ನಂತರ, ಮತ್ತೈ ದೇವಸ್ಥಾನದ ಬಳಿ ಸೇರಿದ್ದ ಯುವಕರು ಹೆಚ್ಚಿನ ಸ್ಥಳೀಯರಿಗೆ ಸುದ್ದಿ ತಿಳಿಸಿದರು. ಸ್ಥಳೀಯರು ಆತನ ಹಿಂದೆ ಓಡುವ ಹೊತ್ತಿಗೆ ಆತ ಪರಾರಿಯಾಗಿದ್ದ.