ಭುವನೇಶ್ವರ: ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನ ತತ್ವಗಳಲ್ಲಿ ಇದೆ ಎಂದು ಸಾರುವಂತಹ ಪರಂಪರೆಯನ್ನು ಭಾರತ ಹೊಂದಿದೆ. ಜಗತ್ತು ಇಂದು ಭಾರತದ ಮಾತನ್ನು ಕೇಳಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
18ನೇ ಪ್ರವಾಸಿ ಭಾರತೀಯ ದಿವಸದ ಪ್ರಯುಕ್ತ ಭುವನೇಶ್ವರದಲ್ಲಿ ನಡೆದ ಸಮಾವೇಶದಲ್ಲಿ ವಲಸಿಗ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಪ್ರಜಾಪ್ರಭುತ್ವದ ತಾಯಿಯಷ್ಟೇ ಅಲ್ಲ.
ಪ್ರಜಾಪ್ರಭುತ್ವವು ಈ ದೇಶದ ಜನರ ಬದುಕಿನ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಜಗತ್ತು, ಖಡ್ಗದ ಸಾಮರ್ಥ್ಯದ ಮೂಲಕ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ್ದ ಕಾಲಘಟ್ಟದಲ್ಲೇ, ಸಾಮ್ರಾಟ ಅಶೋಕನು ಬುದ್ಧ ಸಾರಿದ ಶಾಂತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ. ಅದು ಭಾರತದ ಪರಂಪರೆಯ ಶಕ್ತಿ ಎಂದು ಒತ್ತಿ ಹೇಳಿದ್ದಾರೆ.
'ಇಂತಹ ಪರಂಪರೆಯನ್ನು ಹೊಂದಿರುವ ಭಾರತ, ಭವಿಷ್ಯವು ಯುದ್ಧದಲ್ಲಿ ಅಲ್ಲ; ಬುದ್ಧನಲ್ಲಿದೆ ಎಂದು ಜಗತ್ತಿಗೆ ಹೇಳಲು ಶಕ್ತವಾಗಿದೆ' ಎಂದು ಹೇಳಿದ್ದಾರೆ.
ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರನ್ನು ದೇಶದ ರಾಯಭಾರಿಗಳೆಂದು ಸದಾ ಪರಿಗಣಿಸುವುದಾಗಿಯೂ ಮೋದಿ ಇದೇ ವೇಳೆ ಹೇಳಿದ್ದಾರೆ.
'ನಾವು ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತ ದೇಶದವರು ಎಂಬುದಷ್ಟೇ ಅಲ್ಲ, ಪ್ರಜಾಪ್ರಭುತ್ವವು ನಮ್ಮ ಬದುಕಿನ ಭಾಗವಾಗಿದೆ. ಜೀವನ ಕ್ರಮವಾಗಿದೆ. ನಾವು ವೈವಿಧ್ಯತೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ, ನಮ್ಮ ಬದುಕೇ ವೈವಿಧ್ಯತೆಯಿಂದ ಕೂಡಿದೆ. ಆ ಕಾರಣಕ್ಕಾಗಿಯೇ, ಭಾರತೀಯರು ಎಲ್ಲಿಗೇ ಹೋದರೂ, ಆ ನಿರ್ದಿಷ್ಟ ಸಮುದಾಯದ ಭಾಗವಾಗಿ ಜೀವಿಸುತ್ತಾರೆ. ನಾವು ಆ ರಾಷ್ಟ್ರದ ನೀತಿಗಳು, ಸಂಪ್ರದಾಯಗಳನ್ನು ಗೌರವಿಸುತ್ತೇವೆ ಮತ್ತು ಆ ಸಮಾಜಗಳಿಗೂ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತೇವೆ. ಅದರ ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಕೊಡುಗೆ ನೀಡುತ್ತೇವೆ. ಅದೇ ವೇಳೆ ನಮ್ಮ ಹೃದಯ ಭಾರತಕ್ಕಾಗಿ ಮಿಡಿಯುತ್ತದೆ' ಎಂದು ಒತ್ತಿ ಹೇಳಿದ್ದಾರೆ.