ತಿರುವನಂತಪುರ: ಮಲಯಾಳಂ ನಟಿ ಹನಿ ರೋಸ್ ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಬಾಬಿ ಅವರನ್ನು ಇಂದು (ಬುಧವಾರ) ಬೆಳಿಗ್ಗೆ ವಯನಾಡಿನ ಎಸ್ಟೇಟ್ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಬಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಕೊಚ್ಚಿ ಸೆಂಟ್ರಲ್ ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸಂಬಂಧ ಹನಿ ರೋಸ್ ಅವರು ಮಂಗಳವಾರ ಖುದ್ದಾಗಿ ಕೊಚ್ಚಿ ಸೆಂಟ್ರಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆಯನ್ನು ದಾಖಲಿಸಿದ್ದರು. ಘಟನೆ ಸಂಬಂಧ ಈಗಾಗಲೇ 30 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
'ಪದೇ ಪದೇ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದು ಸಮಾಧಾನ ತಂದಿದೆ. ತುರ್ತಾಗಿ ಕ್ರಮ ಜರುಗಿಸಿದ ಪೊಲೀಸರಿಗೆ ಧನ್ಯವಾದಗಳು' ಎಂದು ಹನಿ ರೋಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹನಿ ರೋಸ್ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಪೊಲೀಸ್ ಕ್ರಮದ ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘವೂ ರೋಸ್ ಬೆನ್ನಿಗೆ ನಿಂತಿತ್ತು.
ಆಭರಣ ಮಳಿಗೆ (ಚೆಮ್ಮನೂರ್ ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್) ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಬಾಬಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುವ ಮೂಲಕ ಆಗಾಗ್ಗೆ ಟೀಕೆಗೆ ಗುರಿಯಾಗಿದ್ದಾರೆ.